ಬಂಟ್ವಾಳ: ಧಾರ್ಮಿಕ ಕಾರ್ಯಕ್ರಮದ ವೇಳೆ ಕೆಲಸದ ವಿಚಾರವಾಗಿ ಉಂಟಾದ ತಕರಾರು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಪ್ರದೇಶದಲ್ಲಿ ನಡೆದಿದೆ.
ಪಿಲಾತಬೆಟ್ಟು ನಿವಾಸಿ ಶೇಖರ (43) ಅವರ ಮನೆಯಲ್ಲಿ ಮೇ 31ರ ರಾತ್ರಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಶೇಖರ ಅವರ ಸಹೋದರ ಮಧುಸೂದನ ಮತ್ತು ಅವರ ಮತ್ತೋರ್ವ ಸಹೋದರನ ಮಗನಾದ ರಾಹುಲ್ ನಡುವೆ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ತಕರಾರಿನಿಂದ ಕೋಪಗೊಂಡ ರಾಹುಲ್ ಅಲ್ಲಿಂದ ತೆರಳಿದ್ದಾನೆ. ಬಳಿಕ ಕಾರ್ಯಕ್ರಮ ಮುಗಿದ ನಂತರ ಮನೆಯ ಸಮೀಪ ಗಲಾಟೆಯ ಶಬ್ದ ಕೇಳಿಬಂದಿದ್ದು, ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರಿಗೆ ರಾಹುಲ್ ಬಿಯರ್ ಬಾಟಲಿಯಿಂದ ಮಧುಸೂದನ ಅವರ ಕುತ್ತಿಗೆಗೆ ತಿವಿದಿರುವುದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಧುಸೂದನ (37) ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 103ರಡಿ ಅ.ಕ್ರ. 58/2026 ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಾಹುಲ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.




























