ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಅಣ್ಣಾಮಲೈಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷ ಸ್ಥಾಪಿಸಬಹುದು ಎಂಬ ಊಹಾಪೋಹಗಳು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದು, ಜೂನ್ 3ರಂದು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ಅಣ್ಣಾಮಲೈ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಷಯದ ಬಳಿಕ ಬಿಜೆಪಿ ನಾಯಕತ್ವದೊಂದಿಗೆ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.
ಇದರ ನಡುವೆ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶವಿರುವ ಈ ಪೋಸ್ಟರ್‌ಗಳು ಅಣ್ಣಾಮಲೈ ಅವರ ಹೊಸ ರಾಜಕೀಯ ಹೆಜ್ಜೆಯ ಸುಳಿವು ನೀಡುತ್ತಿವೆ. ಅಣ್ಣಾಮಲೈ “ಮಕ್ಕಳ್ ಶಕ್ತಿ ಇಯಕ್ಕಂ” ಹೆಸರಿನ ಹೊಸ ಪಕ್ಷವನ್ನು ಆರಂಭಿಸುವ ಸಾಧ್ಯತೆ ಇದೆ ಎಂಬ ಮಾತು ತಮಿಳುನಾಡು ರಾಜಕೀಯ ವಲಯ ಕೇಳಿಬರುತ್ತಿದೆ. ಆದರೆ ಈ ಕುರಿತು ಅಣ್ಣಾಮಲೈ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2021 ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಅಣ್ಣಾಮಲೈ, ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಪ್ರಮುಖ ಕಾರಣರಾಗಿದ್ದರು.
ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡ ವಿಚಾರಕ್ಕೂ ಅಣ್ಣಾಮಲೈ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಚುನಾವಣಾ ಪ್ರಚಾರದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಅಣ್ಣಾಮಲೈ ಸತತವಾಗಿ ಎರಡು ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಗಳಿಗೆ ಗೈರಾಗಿರುವುದು ಕೂಡ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಜೂನ್ 3ರಂದು ಅಣ್ಣಾಮಲೈ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದರತ್ತ ತಮಿಳುನಾಡು ಮಾತ್ರವಲ್ಲದೆ ದೇಶದ ರಾಜಕೀಯ ವಲಯ ಕಣ್ಣಿಟ್ಟಿದೆ.




























