ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಿಡಿ ಹೊತ್ತಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಜ್ವಾಲೆಯಾಗಿ ಮಾರ್ಪಡುತ್ತಿದೆ. ಆರಂಭದಲ್ಲಿ ಸಚಿವರಿಗೆ ನೀಡಿದ ಎಚ್ಚರಿಕೆ ನೀಡಿತ್ತಾದರೂ ಆಮೇಲೆ ಆರೋಪ-ಪ್ರತ್ಯಾರೋಪಗಳ ನಡುವೆ ಸಿದ್ದರಾಮಯ್ಯನವರನ್ನು ಸ್ಟಿಂಗ್ ಆಪರೇಷನ್ ಬಲೆಗೆ ಬೀಳಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸಿದ್ದರಾಮಯ್ಯ, ಅಪಪ್ರಚಾರಕ್ಕೆ ತಡೆಯಾಜ್ಞೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಸ್ಟಿಂಗ್ ಆಪರೇಷನ್ ಸುತ್ತ ರಾಜಕೀಯದ ಹೊಸ ಅಧ್ಯಾಯವೇ ಶುರುವಾಗಿದೆ.
ಹೀಗಾಗಿ ಸಂಬಂಧ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ಸ್ಟ್ರಿಂಗ್ ಆಪರೇಷನ್ ವಿಡಿಯೋ ಬಳಸಿಕೊಂಡು ಕೆಲವು ಕಿಡಿಗೇಡಿಗಳು, ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ತಿಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ರಾಜಕೀಯ ಜೀವನದ ಅರಿವು ಇರುವ ರಾಜ್ಯದ ಜನತೆಗೂ ಇದು ಗೊತ್ತಿದೆ ಎನ್ನುವ ವಿಶ್ವಾಸ ನನಗಿದೆ. ಯಾವ ಭಯವೂ ನನಗಿಲ್ಲ, ಅಂತಿಮವಾಗಿ ಸತ್ಯವೇ ಗೆಲ್ಲುತ್ತೆಂಬ ವಿಶ್ವಾಸವಿದೆ. ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ.ಈ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರಿನ ಉಲ್ಲೇಖ ಇರುವ ಈ ಸ್ಟ್ರಿಂಗ್ ಆಪರೇಷನ್ ವಿಡಿಯೋ ಅನ್ನು ಯಾವುದೇ ಪತ್ರಿಕೆ, ಚಾನೆಲ್ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರಿ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆಯೇ ಹೊರತು ಉಳಿದಂತೆ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ನನಗಿದೆ ಎಂದಿದ್ದಾರೆ.



























