ಕಡಬ: ಬಾರ್ವೊಂದರ ಬಳಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಕಡಬ ತಾಲೂಕಿನ ಬಂಟ್ರ ಗ್ರಾಮದಲ್ಲಿ ನ. 27ರಂದು ನಡೆದಿದೆ.
ಕಡಬ ಐತೂರು ನಿವಾಸಿ ವಸಂತ ಗೌಡ (52) ಹಲ್ಲೆಗೊಳಗಾದವರು. ಇವರು ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದು, ನ. 27ರಂದು ಮಧ್ಯಾಹ್ನ ಬಂಟ್ರ ಗ್ರಾಮದ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ತೆರಳಿದ್ದ ವೇಳೆ, ಪರಿಚಯದ ಐತೂರು ನಿವಾಸಿ ಗಣೇಶ್ ಎಂಬಾತ ಅವರನ್ನು ತಡೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ವಸಂತ ಗೌಡ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























