ವಿಟ್ಲ: ಕ್ರಿಕೆಟ್ ಪಂದ್ಯಾಟದಲ್ಲಿ ಸ್ಕೋರ್ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಯುವಕರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಹಳೀರ ನಿವಾಸಿ ಶೌಕತ್ ಅಲಿ ಅವರ ಪುತ್ರ ರಿಜ್ವಾನ್ (22) ಹಲ್ಲೆಗೊಳಗಾದವರು.ರಿಜ್ವಾನ್ ಅವರು ಅ. 11ರಂದು ಸ್ನೇಹಿತರಾದ ಶರೀಫ್ ಮತ್ತು ನಶಾತ್ ಅವರೊಂದಿಗೆ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸಲಾಗಿದ್ದ 18 ವರ್ಷದೊಳಗಿನ ಮಕ್ಕಳ ಆಹ್ವಾನಿತ ಎಂಟು ತಂಡಗಳ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ತೆರಳಿದ್ದರು.
ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕ್ವಾಲಿಟಿ ಮಾಣಿ ಮತ್ತು ಜಿಎಫ್‌ಸಿ ಗಡಿಯಾರ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಸ್ಕೋರ್ ವಿಚಾರವಾಗಿ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಡಿಯಾರ ತಂಡದ ಸಮ್ಮಾಸ್ ಎಂಬಾತ ರಿಜ್ವಾನ್ ಅವರ ಸ್ನೇಹಿತ ನಶಾತ್‌ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎನ್ನಲಾಗಿದೆ.
ಇದನ್ನು ಪ್ರಶ್ನಿಸಿದ ರಿಜ್ವಾನ್ ಅವರ ತಲೆ ಮತ್ತು ಮುಖದ ಭಾಗಕ್ಕೆ ಸಮ್ಮಾಸ್ ಹಾಗೂ ಆತನ ಇಬ್ಬರು ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿದ್ದವರು ಹಲ್ಲೆಯನ್ನು ತಡೆದಿದ್ದು, ಬಳಿಕ ಅಲ್ಲಿಂದ ತೆರಳುತ್ತಿದ್ದ ಸಮ್ಮಾಸ್ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ರಿಜ್ವಾನ್ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























