ಪುತ್ತೂರು: ಪುತ್ತೂರು–ಉಪ್ಪಿನಂಗಡಿ ರಸ್ತೆಯ ಹಾರಾಡಿ ಭಾಗದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಆರೋಪಿಸಿದರು.
ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಅವರು ಮಂಗಳವಾರ ಸಂಜೆ ಹಾರಾಡಿ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯರು ಹಾಗೂ ವಾಹನ ಸವಾರರಿಂದ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಅಲ್ಲಿಂದಲೇ ಸಂಬಂಧಿತ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ವಿಜಯಾನಂದ ಶೆಟ್ಟಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
ಕಾಂಕ್ರೀಟ್ ರಸ್ತೆಯ ಎರಡೂ ಬದಿಗಳಿಗೆ ತಕ್ಷಣ ಮಣ್ಣು ಹಾಕಿ ವಾಹನಗಳ ಸಂಚಾರಕ್ಕೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವಂತೆ ಅವರು ಸೂಚಿಸಿದರು. ರಸ್ತೆ ನಿರ್ಮಾಣ ಪೂರ್ಣಗೊಂಡ ಬಳಿಕ ಡ್ರೈನೇಜ್ ಕಾಮಗಾರಿ ಹಾಗೂ ಕೇಬಲ್ ಅಳವಡಿಕೆ ಸೇರಿದಂತೆ ಇತರ ಕೆಲಸಗಳ ನೆಪದಲ್ಲಿ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗಿದೆ ಎಂದು ಅವರು ಹೇಳಿದರು.
ಈ ಕುರಿತು ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದು, ಬುಧವಾರದಿಂದಲೇ ಕಾಂಕ್ರೀಟ್ ರಸ್ತೆಯ ಬದಿಗಳಿಗೆ ಮಣ್ಣು ಹಾಕುವ ಕೆಲಸ ಆರಂಭಿಸಿ, ಅಗತ್ಯವಿದ್ದರೆ ರಾತ್ರಿ ವೇಳೆಯಲ್ಲಿಯೂ ಕಾಮಗಾರಿ ನಡೆಸಿ ಶೀಘ್ರ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಶಾಸಕರು ಹೆಚ್ಚಿನ ಗಮನ ಹರಿಸಬೇಕಿತ್ತು :ಹಾರಾಡಿ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಈ ಬಗ್ಗೆ ಮೊದಲಿನಿಂದಲೇ ಗಮನಹರಿಸಿ, ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕಾಗಿತ್ತು. ಯೋಜನೆಯ ಅಂದಾಜು ಮತ್ತು ಅನುಷ್ಠಾನವನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಸಾರ್ವಜನಿಕರಿಗೆ ಇಷ್ಟು ತೊಂದರೆ ಉಂಟಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.



























