ಪುತ್ತೂರು:ಪುಣಚ ಗ್ರಾಮದ ಕಾಲನಿಯ ನಿವಾಸಿಗಳಿಗೆ 94ಸಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿ ಇತ್ತೀಚೆಗೆ ಬಂಟ್ವಾಳ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆ ಹೊಸ ತಿರುವು ಪಡೆದುಕೊಂಡಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಫಲಾನುಭವಿಗಳು ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಶಾಸಕರ ಕಚೇರಿಗೆ ಭೇಟಿ ನೀಡಿದ ಫಲಾನುಭವಿಗಳು, “ನಾವು ನಿಮ್ಮ ವಿರುದ್ಧ ಪ್ರತಿಭಟನೆ ನಡೆಸಿಲ್ಲ. ಹೋರಾಟಕ್ಕೆ ಬಿಜೆಪಿಯವರನ್ನು ನಾವು ಆಹ್ವಾನಿಸಿಲ್ಲ. ಅವರೇ ನಮ್ಮನ್ನು ಕರೆದುಕೊಂಡು ಹೋಗಿ ಏನು ಮಾತನಾಡಬೇಕು, ಹೇಗೆ ಪ್ರತಿಭಟನೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ನಾವು ಯಾರ ವಿರುದ್ಧವೂ ಮಾತನಾಡಿಲ್ಲ. ನಮ್ಮ ಸಮಸ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, “ನಮ್ಮ ಜಾಗದ ಹಕ್ಕುಪತ್ರ ಪ್ರಕ್ರಿಯೆ ನಡೆಸಿಕೊಟ್ಟವರು ಶಾಸಕ ಅಶೋಕ್ ರೈ ಅವರೇ ಎಂಬುದನ್ನು ನಾವು ಮೊದಲಿನಿಂದಲೂ ಹೇಳಿದ್ದೇವೆ. ಆದರೆ ಹಕ್ಕುಪತ್ರ ಇನ್ನೂ ಕೈಗೆ ಸಿಗದಿರುವುದನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರೆ ಬೇಗ ಸಿಗುತ್ತದೆ ಎಂದು ನಮಗೆ ಮನವರಿಕೆ ಮಾಡಲಾಯಿತು. ಕಾನೂನು ಪ್ರಕಾರ ಹಕ್ಕುಪತ್ರ ನೀಡಲು ಅಡಚಣೆಗಳಿವೆ, ಆದರೆ ಅದನ್ನು ಶೀಘ್ರ ಪಡೆಯಬೇಕಾದರೆ ಹೋರಾಟ ನಡೆಸಬೇಕು ಎಂದು ಹೇಳಿ ಬಂಟ್ವಾಳ ತಾಲೂಕು ಕಚೇರಿ ಎದುರು ಕೂರಿಸಿದರು” ಎಂದು ಆರೋಪಿಸಿದ್ದಾರೆ.
ಅಲ್ಲದೆ, “ನಾವು ನಿಮ್ಮ ವಿರುದ್ಧವಾಗಲಿ, ಸರ್ಕಾರದ ವಿರುದ್ಧವಾಗಲಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ಫಲಾನುಭವಿಗಳು ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ನಿಮಗೆ ಹಕ್ಕುಪತ್ರ ಸಿಕ್ಕರೆ ನಾನು ಕಳೆದುಕೊಳ್ಳುವಂತಹದ್ದೇನೂ ಇಲ್ಲ. ನಿಮ್ಮ ಹಕ್ಕುಪತ್ರವನ್ನು ಮಾಡಿಕೊಟ್ಟವರು ಬಿಜೆಪಿ ಶಾಸಕರು ಅಲ್ಲ, ನಾನೇ. ಎಲ್ಲವೂ ಸರಿಯಾಗುವ ಹಂತದಲ್ಲಿದ್ದಾಗ ಪ್ರತಿಭಟನೆ ನಡೆಸಲಾಗಿದೆ. ಈಗ ಆ ವಿಷಯಕ್ಕೆ ಸಂಬಂಧಿಸಿ ಕೆಲವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಂದೆ ಕಾನೂನು ಪ್ರಕಾರ ಏನು ತೀರ್ಮಾನವಾಗುತ್ತದೆಯೋ ಅದೇ ಆಗಲಿದೆ” ಎಂದು ಹೇಳಿದರು.
“ನಿಮ್ಮನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿಸಿದವರು ಈಗ ನಿಮ್ಮ ಜೊತೆ ಇದ್ದಾರೆಯೇ? ನೀವು ಈ ರಾಜಕೀಯ ಬೆಳವಣಿಗೆಯಲ್ಲಿ ಬಲಿಪಶುಗಳಾಗಿದ್ದೀರಿ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ಶಾಸಕರು ತಿಳಿಸಿದರು.
94ಸಿ ಹಕ್ಕುಪತ್ರ ವಿಚಾರದಲ್ಲಿ ನಡೆದ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಫಲಾನುಭವಿಗಳ ಹೇಳಿಕೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.




























