ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣ್ಣಂನಿಂದ ಮಾದಕ ವಸ್ತು ಹ್ಯಾಶಿಸ್ ಆಯಿಲ್ ತಂದು ಮಾರಾಟ ಮಾಡುತ್ತಿದ್ದ ಯುವತಿ, ಇಬ್ಬರು ಪ್ರೇಮಿಗಳು ಸೇರಿ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳದ ವಿಕ್ರಂ ಅಲಿಯಾಸ್ ವಿಕ್ಕಿ (23), ಕೇರಳದ ಕೊಟ್ಟಾಯಂನ ಸಿಗಿಲ್ ವರ್ಗಿಸ್ (23) ಹಾಗೂ ಕೊಯಮತ್ತೂರಿನ ವಿಷ್ಣುಪ್ರಿಯಾ(22) ಬಂಧಿತರು.
ಆರೋಪಿಗಳಿಂದ ಸುಮಾರು 7.76 ಕೋಟಿ ರೂ. ಮೌಲ್ಯದ 12 ಕೆ.ಜಿ. 940 ಗ್ರಾಂ ತೂಕದ ಹ್ಯಾಶಿಸ್ ಆಯಿಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.5ರಂದು ಬೆಳಗ್ಗೆ 8.30ರ ಸುಮಾರಿಗೆ ಬಿಟಿಎಂ ಲೇಔಟ್ 4ನೇಹಂತದ ಅರಕೆರೆ ಗ್ರಾಮದ ಕಾರ್ ಪಾರ್ಕ್ ಬಳಿ ಆರೋಪಿ ವಿಕ್ರಂ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆಹುಳಿಮಾವು ಠಾಣೆ ಇನ್ಸ್‌ಪೆಕ್ಟರ್ ಎಲ್.ಟಿ.ಚಂದ್ರಕಾಂತ್ ನೇತೃತ್ವದಪೊಲೀಸರ ತಂಡ ಆತನನ್ನು ವಶಕ್ಕೆ ಪಡೆದಿದೆ. ಈ ವೇಳೆ ಆರೋಪಿಯಿಂದ 80 ಗ್ರಾಂ ತೂಕದ ಹ್ಯಾಶಿಸ್ ಆಯಿಲ್ ಜಪ್ತಿ ಮಾಡಲಾಗಿದೆ. ಈತನ ವಿಚಾರಣೆ ಮೇರೆಗೆ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರೇಮಿಗಳ ದಂಧೆ:
ಆರೋಪಿಗಳ ಪೈಕಿ ಕೇರಳ ಮೂಲದ ಸೀಗಿಲ್ ಮತ್ತು ತಮಿಳುನಾಡು ಮೂಲದ ವಿಷ್ಣುಪ್ರಿಯ ಪ್ರೇಮಿಗಳಾಗಿದ್ದು, ಕಳೆದ ಮೂರು ತಿಂಗಳಿಂದ ನಗರದ ಕೊತ್ತನೂರಿನ ಕುವೆಂಪು ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಆರ್ಥಿಕ ಸಮಸ್ಯೆ ಯಿಂದಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಹ್ಯಾಶಿಸ್ ಆಯಿಲ್ ತರಿಸಿಕೊಂಡು ಪ್ಲಾಸ್ಟಿಕ್‌ನ ಸಣ್ಣ ಕಂಟೈನರ್‌ಗಳಲ್ಲಿ ತುಂಬಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ವಿಚಾರಣೆ ವೇಳೆ ಈ ಆರೋಪಿ ಗಳು ನೀಡಿದ ಮಾಹಿತಿ ಮೇರೆಗೆ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ 10 ಕೆ.ಜಿ.500 ಗ್ರಾಂ ತೂಕದ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.