ತಿರುವನಂತಪುರಂ: ಮನೆಯೊಂದಲ್ಲಿ ಬೆಂಕಿ ಅವಘಡ ಉಂಟಾಗಿ ಪುಟ್ಟ ಕಂದಮ್ಮ ಸೇರಿದಂತೆ ಒಂದೇ ಕುಟುಂಬ ಐವರು ಆಹುತಿಯಾದ ಹೃದಯವಿದ್ರಾವಕ ಘಟನೆ ಕೇರಳದ ವರ್ಕಲಾದಲ್ಲಿ ನಡೆದಿದೆ.
ದಲವಾಪುರಂನಲ್ಲಿ ಈ ಕುಟುಂಬ ವಾಸವಿದ್ದ ಮನೆಯಲ್ಲಿ ರಾತ್ರಿ 1.45ರ ಸುಮಾರಿಗೆ ಅಗ್ನಿ ಆಕಸ್ಮಿಕ ಉಂಟಾಗಿದೆ.
ಮೃತರನ್ನು ಪ್ರತಾಪನ್ (62), ಅವರ ಪತ್ನಿ ಶೆರ್ಲಿ (53), ಸೊಸೆ ಅಭಿರಾಮಿ (25), ಕಿರಿಯ ಮಗ ಅಖಿಲ್ (29) ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗ ರಿಯಾನ್ ಎಂದು ಗುರುತಿಸಲಾಗಿದೆ.
ಪ್ರತಾಪನ್ ಅವರು ತರಕಾರಿ ವ್ಯಾಪಾರಿಯಾಗಿದ್ದರು. ಅವರು ವರ್ಕಲಾದಲ್ಲಿ ಕೆಲವು ಸಮಯದಿಂದ ಅವರು ವ್ಯಾಪಾರ ಮಾಡುತ್ತಿದ್ದರು. ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿದ್ದವರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಅವರಾಗಿದ್ದಾರೆ. ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬರುವಾಗ ಮನೆ ಬೆಂಕಿಗೆ ಆಹುತಿಯಾಗಿತ್ತು. ಮನೆಯಲ್ಲಿದ್ದ ಕನಿಷ್ಠ ಎರಡು ಬೈಕ್‌ಗಳು ಹಾಗೂ ಹವಾ ನಿಯಂತ್ರಕಗಳು ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಅಗ್ನಿಯ ಜ್ವಾಲೆಗಳು ಬಲು ಬೇಗನೆ ಎರಡು ಮಹಡಿಯ ಮನೆಯನ್ನು ಆವರಿಸಿಕೊಂಡಿದೆ. ಅದರ ರಭಸಕ್ಕೆ ಮನೆಯ ಒಳಾಂಗಣ ಸಂಪೂರ್ಣವಾಗಿ ಭಸ್ಮವಾಗಿದೆ. ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.
ಬೆಂಕಿಯಿಂದ ದಟ್ಟನೆಯ ಹೊಗೆ ಆವರಿಸಿತ್ತು. ಈ ಹೊಗೆ ಸೇವಿಸಿ ಎಲ್ಲರೂ ಜೀವ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.
ಎರಡು ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದರೂ ನೆರೆಮನೆಯ ವ್ಯಕ್ತಿಯೊಬ್ಬರು ಕಂಡರು. ಕೂಡಲೇ ಅವರು ಅಕ್ಕಪಕ್ಕದ ಮನೆಗಳ ಜನರನ್ನು ಎಬ್ಬಿಸಿ ಮಾಹಿತಿ ನೀಡಿದರು. ನಿಹುಲ್ ಅವರಿಗೆ ಕರೆ ಮಾಡಿ ಎಚ್ಚರಿಸಿದರು. ಮನೆಯ ಮಹಡಿಯಲ್ಲಿದ್ದ ನಿಹುಲ್ ಕೆಳಗೆ ಬರಲು ಪ್ರಯತ್ನಿಸಿದರು. ಆದರೆ ತಮ್ಮ ಎಂಟು ತಿಂಗಳ ಮಗುವನ್ನು ಕಾಪಾಡಲು ಮತ್ತೆ ಒಳಗೆ ಹೋಗಿದ್ದರು ಎನ್ನಲಾಗಿದೆ.