ಪುತ್ತೂರು:ಮೃತ್ಯದೋಷ ಪರಿಹಾರಕ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವವು ಮಾ.೧೫ ಪ್ರಾರಂಭಗೊಂಡಿತು. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಮಾ.೧೫ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿಪುಣ್ಯಾಹವಾಚನ, ಶ್ರೀ ಮಹಾಗಣಪತಿ ಹೋಮ ನಡೆಯಿತು.
ಮತ್ಯುಂಜಯೇಶ್ವರ ದೇವರಿಗೆ ವಿಶೇಷ ಸೇವೆಯಾಗಿರುವ ಮಹಾಮೃತ್ಯುಂಜಯ ಹೋಮ ಪ್ರಾರಂಭಗೊಂಡು ಮಧ್ಯಾಹ್ನ ಮಹಾಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಮೃತ್ಯುಂಜಯ ಹೋಮ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು . ಮಧ್ಯಾಹ್ನ ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ, ವಸಂತ ಕಟ್ಟೆ ಪೂಜೆ ನಡೆಯಿತು. ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು, ಸದಸ್ಯರು, ವಿವಿಧ ಸಾಮಾಜಿಕ, ರಾಜಕೀಯ ಮುಖಂಡರುಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.