ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಪ್ರಕಟಿಸಿರುವ ನೂತನ ಟಿ20 ರ‍್ಯಾಂಕಿಂಗ್ ನಲ್ಲಿ ನಲ್ಲಿ ಒಂದು ಸ್ಥಾನ ಮೇಲೇರಿ 5ನೇ ಸ್ಥಾನ ಅಲಂಕರಿಸಿದ್ದಾರೆ. ವಿರಾಟ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಪರಿಣಾಮ ಐಸಿಸಿಯ ನೂತನ ಟಿ20 ರ‍್ಯಾಂಕಿಂಗ್ ನಲ್ಲಿ ನಲ್ಲಿ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 73 ರನ್ ಮತ್ತು 3ನೇ ಪಂದ್ಯದಲ್ಲಿ 77 ರನ್ ಸಿಡಿಸಿ ಮಿಂಚಿದ್ದರು. ಹಾಗಾಗಿ ಐಸಿಸಿಯ ನೂತನ ರ‍್ಯಾಂಕಿಂಗ್ ನಲ್ಲಿ 744 ಅಂಕಗಳೊಂದಿಗೆ 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕೊಹ್ಲಿ ಒಂದು ಸ್ಥಾನ ಭಡ್ತಿ ಪಡೆದರೆ ಇತ್ತ ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸತತ ಶೂನ್ಯ ಸಂಪಾದಿಸಿ ನಿರಾಸೆ ಮೂಡಿಸಿದ ಪರಿಣಾಮ ಒಂದು ಸ್ಥಾನ ಕುಸಿದಿದ್ದಾರೆ. ಈ ಮೊದಲು ಐಸಿಸಿಯ ಟಿ20 ರ‍್ಯಾಂಕಿಂಗ್ ನಲ್ಲಿ 3ನೇ ಸ್ಥಾನದಲ್ಲಿದ್ದ ರಾಹುಲ್ ಒಂದು ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ.
ಐಸಿಸಿಯ ನೂತನ ಟಿ20 ರ‍್ಯಾಂಕಿಂಗ್ ನಲ್ಲಿ ರಾಹುಲ್ ಮತ್ತು ವಿರಾಟ್ ಕೊಹ್ಲಿಯನ್ನು ಹೊರತು ಪಡಿಸಿ ಬೇರೆ ಯಾವುದೇ ಭಾರತದ ಬ್ಯಾಟ್ಸ್‌ಮ್ಯಾನ್ ಗಳು ಅಗ್ರ ಹತ್ತರ ಕ್ರಮಾಂಕದಲ್ಲಿ ಕಾಣಿಸಿಕೊಂಡಿಲ್ಲ. 894 ಅಂಕಗಳೊಂದಿಗೆ ಟಿ20 ಕ್ರಿಕೆಟ್‍ನ ನಂಬರ್ 1 ಬ್ಯಾಟ್ಸ್‌ಮ್ಯಾನ್ ಆಗಿ ಇಂಗ್ಲೆಂಡ್‍ನ ಡೇವಿಡ್ ಮಲಾನ್ ಮುಂದುವರೆದರೆ, ನಂತರದ ಸ್ಥಾನವನ್ನು 830 ಅಂಕಗಳೊಂದಿಗೆ ಆಸ್ಟ್ರೇಲಿಯಾದ ಆರೋನ್ ಫಿಂಚ್ ಪಡೆದಿದ್ದಾರೆ.