ಮಂಗಳೂರು: ಮಂಗಳೂರಿನಲ್ಲಿ ಕೊರೋನಾ ಭಯ ಜನತೆಯನ್ನು ಮತ್ತೆ ಕಾಡಲಾರಂಭಿಸಿದೆ. ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಕೇರಳದಿಂದ ಮಂಗಳೂರಿಗೆ ಬರುವ ವಿದ್ಯಾರ್ಥಿಗಳಿಂದಲೇ ಸೋಂಕು ಹರಡುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದ ಗಡಿ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಮಂಗಳೂರಿನ ಬಹುತೇಕ ಮೆಡಿಕಲ್ ಕಾಲೇಜುಗಳಲ್ಲಿ ಕೇರಳ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇರಳದಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳಿಂದ ಸೋಂಕು ಹರಡುತ್ತಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಬುಧವಾರ ಬರೋಬ್ಬರಿ 72 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಇದರಲ್ಲಿ 30 ರಷ್ಟು ಮಂದಿ ವಿದ್ಯಾರ್ಥಿಗಳೇ ಇದ್ದಾರೆ. ಮಂಗಳೂರಿನ ಬಳ್ಳಾಲ್‌ಬಾಗ್ ಕಾಲೇಜೊಂದರಲ್ಲಿ ಮಾರ್ಚ್ 11ರ ಬಳಿಕ ಶೇ.50ರಷ್ಟು ಕೇರಳ ವಿದ್ಯಾರ್ಥಿಗಳಿಗೆ ಸೋಂಕು ಹರಡಿದ್ದು, ಕಾಲೇಜು ಹಾಸ್ಟೆಲ್‌ನ್ನು ಕಂಟೈನ್‌ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ. ಮಾ.11ರಂದು ಇಲ್ಲಿ ಮೂವರಿಗೆ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲ 650ರಷ್ಟು ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿತ್ತು. ಬುಧವಾರ ಇಲ್ಲಿನ 25 ವಿದ್ಯಾರ್ಥಿಗಳ ವರದಿ ಪಾಸಿಟಿವ್ ಬಂದಿದೆ.
ಇನ್ನೊಂದು ಪ್ರಕರಣದಲ್ಲಿ ದೇರಳಕಟ್ಟೆಯ ಶಿಕ್ಷಣ ಸಂಸ್ಥೆಯೊಂದರ 30 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದರಿಂದ ಅಲ್ಲೂ ಕಂಟೈನ್‌ಮೆಂಟ್ ವಲಯ ಘೋಷಿಸಿ ಸೋಂಕಿತರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕೊರೋನಾ ಪತ್ತೆಯಾದ ಕೂಡಲೆ ಈ ಕಾಲೇಜಿನ ಇತರ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದ್ದು, ಈಗಾಗಲೇ 800ರಷ್ಟು ಮಂದಿ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ವರದಿ ಪರಿಶೀಲನೆ ಚುರುಕು
ಕೇರಳದಿಂದ ದಕ್ಷಿಣ ಕನ್ನಡಕ್ಕೆ ಕೊರೋನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಜಿಲ್ಲೆಯ ಐದು ಗಡಿ ಪ್ರದೇಶಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಪರಿಶೀಲನೆ ಕಾರ್ಯ ಬುಧವಾರ ಸಾಂಕೇತಿಕ ವಾಗಿ ಆರಂಭವಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದು, ಕೇರಳದಿಂದ ನೆಗೆಟಿವ್ ವರದಿ ತಂದವರಿಗೆ ಪ್ರವೇಶ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪೊಲೀಸ್ ಸಿಬ್ಬಂದಿಯನ್ನು ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು
ಅಧಿಕಾರಿಗಳು ತಿಳಿಸಿದ್ದಾರೆ.
ಐದು ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ದ.ಕ. ಜಿಲ್ಲಾಡಳಿತ ಅಲರ್ಟ್ ಆಗಿದೆ. ಜಿಲ್ಲೆಯ ತಲಪಾಡಿ, ಸಾರಡ್ಕ, ಜಾಲ್ಸೂರು, ಪಾಣತ್ತೂರು ಚೆಕ್ ಪೋಸ್ಟ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಉಳಿದ ಗಡಿ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದೆ. ಕೇರಳದಿಂದ ಮಂಗಳೂರಿಗೆ ಪ್ರವೇಶಿಸಬೇಕಾದರೆ 72 ಗಂಟೆಯೊಳಗಿನ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಗಡಿಯಲ್ಲಿ ಗಂಟಲ ದ್ರವ ಮಾದರಿ ನೀಡಿಯೇ ಮುಂದುವರಿಯಬೇಕಾಗುತ್ತದೆ. ಈ ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚರವಹಿಸಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ