ಭಾರೀ ವಿವಾದಿತ ಹಿಜಾಬ್ ಕೇಸ್ ತೀರ್ಪು ಹೈಕೋರ್ಟ್ ನಾಳೆ ನೀಡಲಿದೆ. ಈ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಹಿಂದೆ ಹಿಜಾಬ್ ಪ್ರಕರಣ ಸಂಬಂಧ ಸುಮಾರು 11 ದಿನ ಸತತವಾಗಿ ಹೈಕೋರ್ಟ್ನಲ್ಲಿ ವಾದ-ಪ್ರತಿವಾದ ಮುಂದುವರಿದಿತ್ತು. ಈಗ ಕೊನೆಗೂ ಈ ವಿವಾದಕ್ಕೆ ಅಂತ್ಯ ಹಾಡೋಕೆ ಮುಂದಾದ ಹೈಕೋರ್ಟ್ ನಾಳೆ ತೀರ್ಪು ನೀಡಿ ಆದೇಶಿಸಲಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ನೀಡಲಿದೆ. ಈ ಹಿಂದೆ ಫೆಬ್ರವರಿ 25ನೇ ತಾರೀಕು ಅಂತಿಮ ತೀರ್ಪು ನೀಡೋದಾಗಿ ಹೈಕೋರ್ಟ್ ಕಾಯ್ದಿರಿಸಿತ್ತು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮಾರ್ಚ್ 15ರ ಮಂಗಳವಾರದಂದು ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಮಂಗಳವಾರದಂದು ಹೈಕೋರ್ಟ್ ನ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರಾಥಮಿಕ, ಪೂರ್ವ ಪ್ರಾಥಮಿಕ, ಪ್ರೌಢ ಶಾಲೆ, ಪಿಯು ಕಾಲೇಜು, ಪದವಿ, ಉನ್ನತ ಶಿಕ್ಷಣ ಸಂಸ್ಥೆಗಳಿಗೂ ದ.ಕ. ಜಿಲ್ಲೆಯಲ್ಲಿ ರಜೆ ನೀಡಿ ಆದೇಶ ನೀಡಲಾಗಿದೆ.
ಏನಿದು ಹಿಜಾಬ್ ಕೇಸ್..?
ಶಾಲಾ ಕಾಲೇಜು ಸಮವಸ್ತ್ರ ಕಡ್ಡಾಯ ಸಂಬಂಧ ಕಾನೂನು ಸಮರ ಇನ್ನೂ ಮುಂದುವರಿದಿದೆ. ತರಗತಿಗಳಲ್ಲಿ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯೇ ಎಂಬ ಸಾಂವಿಧಾನಿಕ ಪ್ರಶ್ನೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪಿಯುಸಿ ಆಗಲಿ, ಪದವಿ ಆಗಲಿ, ಸಮವಸ್ತ್ರ ನಿಯಮ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಗುರುತು ಧರಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.