ಮಂಗಳೂರು: ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅತ್ಯಗತ್ಯ ಭಾಗವಲ್ಲ ಎಂದು ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನಾರ್ಥವಾಗಿ ನಾಳೆ ಮುಸ್ಲಿಂ ಸಮುದಾಯ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ಗೆ ಮುಸ್ಲಿಂ ವಿದ್ವಾಂಸ ಅಮೀರ್ ಎ ಶರೀಯತ್ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿದ್ದಾರೆ.
ನಾಳೆ ಎಲ್ಲರೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ನ್ಯಾಯಕ್ಕಾಗಿ ಒತ್ತಾಯಿಸಿ ಈ ಬಂದ್ ಕರೆ ನೀಡಲಾಗಿದ್ದು, ಬಂದ್ ಶಾಂತಿಯುತವಾಗಿರಬೇಕು.
ಬಲವಂತದ ಬಂದ್ ನಡೆಸಬಾರದು. ಜಾಥಾ, ಮೆರವಣಿಗೆ ಕೂಡ ನಡೆಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಈ ಬಂದ್‌ಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದ್ದು, ಈ ಬಗ್ಗೆ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಹೇಳಿಕೆ ನೀಡಿ, ಈ ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದುಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲಿ ಸಹ ಸ್ವಯಂ ಪ್ರೇರಿತವಾಗಿ ಶಾಂತಿಯುತ ವ್ಯವಹಾರ ಸ್ಥಗಿತ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ಪಿಎಫ್‌ಐನ ಕರ್ನಾಟಕ ರಾಜ್ಯ ಸಮಿತಿ ಸಹ ಬೆಂಬಲ ವ್ಯಕ್ತಪಡಿಸಿದೆ. ಎಸ್.ಡಿ. ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಹ ಸಂಪೂರ್ಣ ಬೆಂಬಲ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.