ಪುತ್ತೂರು: ಬಿಜೆಪಿ ಮತ್ತು ಎಸ್‌ಡಿಪಿಐ ನಡುವೆ ಅಂಡರ್ ಸ್ಟ್ಯಾಂಡಿಂಗ್ ರಾಜಕೀಯ, ಒಳ ಒಪ್ಪಂದ ನಡೆದಿದೆ ನಾವು ಹೇಳುತ್ತಲೇ ಬಂದಿದ್ದು ಇದೀಗ ಒಂದೊಂದು ಘಟನೆಯ ಹಿಂದೆ ಇವರ ಒಳ ಒಪ್ಪಂದ ಬಯಲಾಗಿದ್ದು ಜನತೆ ಎರಡೂ ಪಕ್ಷದ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ನಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಎಸ್‌ಡಿಪಿಐ ಕಾರ್ಯಕರ್ತರು ಅಡ್ಡಿ ಮಾಡಿದ್ದು ಬಿಜೆಪಿ ಮತ್ತು ಎಸ್‌ಡಿಪಿಐ ಒಳಗೆ ನಡೆದ ಒಪ್ಪಂದದ ಭಾಗವಾಗಿದೆ. ಆ ದಿನ ಬಿಜೆಪಿಯವರು ಹೇಳಿದ್ದೇನು , ನಂತರ ಮಾಡಿದ್ದೇನು ಎಂಬುದು ಜನರಿಗೆ ಗೊತ್ತಾಗಿದೆ. ಆ ಬಳಿಕ ಬಸ್‌ನಲ್ಲಿ ಭಿನ್ನ ಕೋಮಿನ ಯುವಕ ಯವತಿ ವಿಚಾರದಲ್ಲಿ ಸಂಘರ್ಷ ಉಂಟಾದಾಗ ಸಂಘಪರಿವಾರದ ಕಾರ್ಯಕರ್ತರು ಪೊಲೀಸರಿಗೆ ಧಮ್ಕಿ ಹಾಕಿ ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು ಆ ಬಳಿಕ ಇದರ ವಿಷಯವೇ ಇಲ್ಲ. ಉಪ್ಪಿನಂಗಡಿಯಲ್ಲಿ ತರಕಾರಿ ಮತ್ತು ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ವಿಚಾರದಲ್ಲಿ ತರಕಾರಿ ಅಂಗಡಿಗೆ ಬೆಂಕಿ ಹಚ್ಚಿದವನ ಬಂಧನವಾಗುತ್ತದೆ. ಮೀನಿನ ಅಂಗಡಿಗೆ ಬೆಂಕಿ ಹಚ್ಚಿದವನನ್ನು ಬಂಧಿಸದೇ ಇದ್ದಲ್ಲಿ ಉಪ್ಪಿನಂಗಡಿ ಹೊತ್ತಿ ಉರಿಸುತ್ತೇವೆ ಎಂದು ಹೇಳಿದ ಸಂಘಪರಿವಾರದವರು ಬಂಧಿತ ಆರೋಪಿ ಎಸ್‌ಡಿಪಿಐ ಕಾರ್ಯಕರ್ತ ಎಂದು ಗೊತ್ತಾದಾಗಲೇ ಮೌನಕ್ಕೆ ಶರಣಾಗಿದ್ದರು.
ಕೊಂಬೆಟ್ಟು ಕಾಲೇಜಿನಲ್ಲಿ ಸಿಎಫ್‌ಐ ಮತ್ತು ಎಬಿವಿಪಿ ವಿದ್ಯಾರ್ಥಿಗಳ ನಡುವಿನ ಹೊಡೆದಾಟ ರಂಪಾಟವನ್ನು ಎಲ್ಲರೂ ನೋಡಿದ್ದಾರೆ ಇದು ಎಸ್‌ಡಿಪಿಐ ಮತ್ತು ಪರಿವಾರ ಸಂಘಟನೆಯ ವಿದ್ಯಾರ್ಥಿ ಸಂಘಟನೆಗಳ ನಡುವೆ ನಡೆದ ಒಳ ಒಪ್ಪಂದದ ಕದನವಾಗಿದೆ, ಹಿಜಾಬ್ ಹಿಂದೆ ಕೂಡಾ ಇದೇ ವಿದ್ಯಾರ್ಥಿ ಸಂಘಟನೆಗಳು ಕರ್ನಾಟಕದಲ್ಲೇ ಸಂಘರ್ಷದ ವಾತಾವರಣವನ್ನು ಸೃಷ್ಟಿ ಮಾಡಿದೆ ಇದೆಲ್ಲದರ ನಡುವೆ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ರವರು ಬಿಜೆಪಿಯೇ ಎಸ್‌ಡಿಪಿಐ ಯನ್ನು ಬೆಳೆಸುತ್ತಿದೆ ಎಂದು ಹೇಳಿದ್ದು ಆ ಬಳಿಕ ಹಿಂದೂ ಸಂಘಟನೆಯ ಮುಖಂಡರಾದ ಸತ್ಯಜಿತ್ ಸುರತ್ಕಲ್ ರವರು ಎಸ್‌ಡಿಪಿಐಗೆ ಬಿಜೆಪಿಯೇ ಫಂಡ್ ನೀಡುತ್ತಿದೆ ಎಂದು ಆರೋಪಿಸುತ್ತಾರೆ. ಇವೆಲ್ಲವನ್ನೂ ಒಟ್ಟು ಅವಲೋಕಿಸಿದಾಗ ಬಿಜೆಪಿ ಮತ್ತು ಎಸ್‌ಡಿಪಿಐ ನಡುವೆ ಅಂಡರ್ ಸ್ಟ್ಯಾಂಡಿಂಗ್ ರಾಜಕೀಯ ಇರುವುದು ಸಾಭೀತಾಗಿದೆ ಎಂದು ಅಮಲರಾಮಚಂದ್ರ ಆರೋಪಿಸಿದರು.
ಸಂಕಷ್ಟಕ್ಕೀಡಾಗುವುದು ಜನ ಸಾಮಾನ್ಯ ಬಿಜೆಪಿ ಮತ್ತು ಎಸ್‌ಡಿಪಿಐ ಎರಡೂ ಸಮಾಜಘಾತುಕ ಶಕ್ತಿಗಳು. ಜನರನ್ನು ಧಾರ್ಮಿಕ ವಿಚಾರದಲ್ಲಿ ಭಾವನೆಗಳನ್ನು ಕೆರಳಿಸಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇವರು ಸಮಾಜದಲ್ಲಿ ಇಂಥಹುದೇ ಕೃತ್ಯಗಳನ್ನು ನಡೆಸಿ ಆಮೂಲಕ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ. ಇದಾವುದನ್ನೂ ಅರಿಯದ ಜನ ಸಾಮಾನ್ಯ ಮಾತ್ರ ಗಲಾಟೆ ನಡೆದು ಸಾವಿಗೀಡಾಗುತ್ತಿದ್ದಾನೆ ಎಂದು ಆರೋಪಿಸಿದ ಅವರು ಎಸ್‌ಡಿಪಿಐ ಬೆಳೆಸಿದರೆ ಮಾತ್ರ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ಬಿಜೆಪಿ ಅಜೆಂಡಾವಾಗಿದೆ.
ಸೇತುವೆ ಉದ್ಘಾಟನೆಗೆ ಪುತ್ತೂರು ಶಾಸಕರು ತೆರಳಿದಾಗ ಬಿಜೆಪಿ ಕಾರ್ಯಕರ್ತರೇ ಶಾಸಕರೆದುರು ಎಸ್‌ಡಿಪಿಐ ವಿಚಾರದಲ್ಲಿ ತರಾಟೆಗೆ ಎತ್ತಿಕೊಂಡಾಗಲೂ ಶಾಸಕರು ಮೌನಕ್ಕೆ ಶರಣಾಗಿರುವುದು ಇವರ ನಡುವಿನ ಸಂಬಂಧದಿಂದಾಗಿದೆ. ಕರ್ನಾಟಕವನ್ನು ಕೋಮು ರಾಜಕೀಯದಿಂದ ಹೊತ್ತಿ ಉರಿಸಲು ಎರಡೂ ಪಕ್ಷಗಳು ಒಂದಾಗಿದೆ. ಜನ ಸಾಮಾನ್ಯ ಅದನ್ನು, ಇವರ ನಡುವಿನ ಒಪ್ಪಂದವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಾರ್ವಜನಿಕರ ಎದುರು ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟ ಮಾಡುತ್ತಿರುವುದು ಬರೇ ನಾಟಕವಾಗಿದೆ. ಇವರಿಬ್ಬರ ನಡುವಿನ ವ್ಯವಹಾರ ತೆರೆಮರೆಯಲ್ಲಿ ನಡೆಯುತ್ತಲೇ ಇದೆ ಇದೇ ಕಾರಣಕ್ಕೆ ಪಿಎಫ್‌ಐ, ಸಿಎಫ್‌ಐ ಮತ್ತು ಎಸ್‌ಡಿಪಿಐ ಯನ್ನು ನಿಷೇಧ ಮಾಡಲು ಬಿಜೆಪಿ ಮುಂದಾಗುತ್ತಿಲ್ಲ. ನಿಷೇಧ ಮಾಡಿದರೆ ಬಿಜೆಪಿಗೆ ನಷ್ಟವಾಗುತ್ತದೆ ಎಂದು ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಇವರಿಬ್ಬರ ಒಳ ಒಪ್ಪದಂದ ದಾಳಕ್ಕೆ ಸಿಲುಕಿ ಜನ ಸಾಮಾನ್ಯ ಮಾತ್ರ ಸಂಕಷ್ಟಕ್ಕೊಳಗಾಗುತ್ತಿರುವುದು ವಿರ‍್ಯಾಸವಾಗಿದ್ದು ಕಾಂಗ್ರೆಸ್ ಎರಡೂ ಪಕ್ಷಗಳ ನಿಜ ಬಣ್ಣವನ್ನು ಬಯಲು ಮಾಡಲಿದೆ ಎಂದು ಅಮಲ ರಾಮಚಂದ್ರ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಶ್ ಮಸ್ಕರೇನಸ್ ಉಪಸ್ಥಿತರಿದ್ದರು.