ಬೆಂಗಳೂರು: ಆಗ್ನೇಯ ವಿಭಾಗದ ಸಿಇಎನ್(Cyber Crime, Economic Offences & Narcotics) ಪೊಲೀಸರು ಕಾರ್ಯಾಚರಣೆ ನಡೆಸಿ, ಆನ್ ಲೈನ್ನಲ್ಲಿ ಲಕ್ಕಿಡ್ರಾ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಅಪ್ಪಾಜಿ, ಗಂಗಾರಾಮ್ ಹಾಗೂ ಸುರೇಶ್ ಬಂಧಿತ ಆರೋಪಿಗಳು.
ಮುಂಬೈ ಮೂಲದ ಹರ್ಷಿದ್ ಎಂಬಾತ ಹೇಳಿದಂತೆ ವಂಚಿಸುತ್ತಿದ್ದ ಆರೋಪಿಗಳು, ಒಂದು ಲಕ್ಷ ಹಣಕ್ಕೆ 3 ಸಾವಿರ ರೂಪಾಯಿ ಕಮಿಷನ್ ಪಡೆಯುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ನಗರದ ಹನುಮಂತರಾಯಪ್ಪ ಎಂಬುವವರಿಗೆ ನೀವು 35 ಲಕ್ಷ ರೂಪಾಯಿ ಲಕ್ಕಿ ಡ್ರಾ ಗೆದ್ದಿದ್ದೀರಿ. ಆ ಹಣ ಪಡೆಯಲು 75 ಸಾವಿರ ರೂಪಾಯಿ ಪ್ರೊಸೆಸಿಂಗ್ ಚಾರ್ಜ್ ನೀಡಬೇಕು ಎಂದು ಹೇಳಿದ್ದರು. ಬಳಿಕ ಅವರಿಂದ ಆರೋಪಿಗಳು ಹಣ ಪಡೆದು ವಂಚಿಸಿದ್ದರು ಎನ್ನಲಾಗಿದೆ.
ಹನುಮಂತರಾಯಪ್ಪ ಆಗ್ನೇಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 2 ಮೊಬೈಲ್ ಫೋನ್, ಆಧಾರ್ ಕಾರ್ಡ್, 15 ಎಟಿಎಂ ಕಾರ್ಡ್ ಹಾಗೂ 10 ಪಾಸ್ ಬುಕ್ಗಳನ್ನು ಜಪ್ತಿ ಮಾಡಲಾಗಿದೆ.