ಬೆಂಗಳೂರು : ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ತೀರ್ಮಾನಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ ಕಂಬಳವನ್ನು ಉತ್ತೇಜಿಸಲು ರೂ.1.00 ಕೋಟಿಗಳ ಸಹಾಯಧನ ಪ್ಯಾಕೇಜ್ ಬಿಡುಗಡೆ ಮಾಡಿದೆ.ಈ ಕುರಿತಂತೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ರಾಜಶೇಖರ್ ಆದೇಶ ಹೊರಡಿಸಿದ್ದಾರೆ.
ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ ರವರು ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಂಬಳ ವೀಕ್ಷಿಸಿ ಸ್ಥಳದಲ್ಲಿಯೇ ಪ್ರತಿ ಕಂಬಳಕ್ಕೆ ರೂ.5 ಲಕ್ಷಗಳ ಸಹಾಯಧನ ಘೋಷಣೆ ಮಾಡಿದ್ದರು. ಈ ಘೋಷಣೆಯ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಸಹಾಯಧನ ಬಿಡುಗಡೆ ಆದೇಶವನ್ನು ಹೊರಡಿಸಿ ಅದೇಶಿಸಿದೆ.
ಈ ಸಹಾಯಧನದ ಪ್ಯಾಕೇಜ್ ಪ್ರತಿ ಕಂಬಳ ಕೂಟಕ್ಕೆ ರೂ.5.00ಲಕ್ಷಗಳನ್ನು ಸಹಾಯಧನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು ರೂ.5.00 ಲಕ್ಷಗಳಂತೆ ರೂ.50.00 ಲಕ್ಷ ಮತ್ತು ಉಡುಪಿ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು ರೂ.5.00 ಲಕ್ಷಗಳಂತೆ ರೂ.1.00 ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಂಬಳಗಳಿಗೆ ಸಹಾಯಧನ ನೀಡಲಾಗುತ್ತಿದೆ.