ಮಂಗಳೂರು: ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಗೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿರುವ ಘಟನೆ ನಡೆದಿದ್ದು, ಕೃತ್ಯದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಫೆ. 24 ರಂದು ದೇವಸ್ಥಾನದ ಕಾಣಿಕೆ ಡಬ್ಬಿ ಹಣದ ಲೆಕ್ಕಚಾರ ನಡೆಸಿದ್ದು, ಎರಡು ದಿನಗಳ ಬಳಿಕ ಟ್ರಸ್ಟಿಯೊಬ್ಬರಿಗೆ ಅಪರಿಚಿತ ಮಹಿಳೆ ಕರೆ ಮಾಡಿ, 500 ರೂ. ನೋಟುಗಳನ್ನು ಮಹಿಳಾ ಟ್ರಸ್ಟಿ ತನ್ನ ಬ್ಲೌಸ್ ಒಳಗೆ ತುರುಕಿಸುತ್ತಿರುವುದನ್ನು ನಾನು ನೋಡಿದ್ದೇನೆ. ಬೇಕಾದರೆ ಸಿಸಿ ಕ್ಯಾಮರಾ ಪರಿಶೀಲಿಸಿ ಎಂದು ಹೇಳಿದ್ದರು. ಬಳಿಕ ಟ್ರಸ್ಟಿಗಳು ಸೇರಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮಹಿಳಾ ಟ್ರಸ್ಟಿಯೊಬ್ಬರು ನೋಟಿನ ಬಂಡಲ್ ಒಂದನ್ನು ಬ್ಯಾಗ್ ಗೆ ಹಾಕುತ್ತಿರುವುದು ಕಂಡು ಬಂದಿದೆ.
ಈ ಕುರಿತು ವ್ಯವಸ್ಥಾಪನ ಆಡಳಿತ ಸಮಿತಿ ತುರ್ತು ಸಭೆ ಕರೆದು ವಾದ ವಿವಾದ ನಡೆದ ಬಳಿಕ ಮಹಿಳಾ ಟ್ರಸ್ಟಿ ರಾಜೀನಾಮೆ ನೀಡುವುದಾಗಿ ಒಪ್ಪಿದ್ದರು. ಆದರೆ ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.