ಬೆಂಗಳೂರು: ಧಾರ್ಮಿಕ ಕ್ಷೇತ್ರದ ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪರ ನಿರ್ಬಂಧ ಪ್ರಕರಣ ಇಂದು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.
ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕ ಯು.ಟಿ ಖಾದರ್ ವಿಷಯ ಪ್ರಸ್ತಾಪಿಸಿ, ಹೊಟ್ಟೆಪಾಡಿಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರಸ್ಥರು ಅವರದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಕರಾವಳಿಯಲ್ಲಿ ನಡೆಯುವ ಅತ್ತೂರು ಚರ್ಚ್, ಉಳ್ಳಾಲ ದರ್ಗಾ, ಬಪ್ಪನಾಡು ಸಹಿತ ವಿವಿಧ ದೇವಸ್ಥಾನದ ಜಾತ್ರೆಗಳಿಗೆ ಎಲ್ಲಾ ಧರ್ಮೀಯರು ಕುಟುಂಬ ಸಮೇತ ಹೋಗುತ್ತಾರೆ. ಆದರೆ ಕೆಲವೊಂದು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲವೊಂದು ಧರ್ಮೀಯರು ವ್ಯಾಪಾರ ನಡೆಸಬಾರದಂದು ಬ್ಯಾನರ್ ಅಳವಡಿಸಿದ್ದಾರೆ. ಅವರು ಹೆಸರಲ್ಲಿ ಹಾಕುವುದಿಲ್ಲ. ಅವರು ಹೇಡಿಗಳು ಕ್ರೂರ ಮನಸ್ಸಿನವರು ಎಂದರು.
ಈ ಬಗ್ಗೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮುಂದುವರೆಸಿದ ಶಾಸಕ ಖಾದರ್, ಮುಲ್ಕಿಯಲ್ಲಿ ದೇವಸ್ಥಾನ ಸಮಿತಿಯವರನ್ನು ನಾನು ಅಭಿನಂದಿಸುತ್ತೇವೆ. ಅವರೇ ಹಿಂದೂ ಸಹೋದರರೇ ಬ್ಯಾನರ್ ಹಾಕಿದವರನ್ನು ಜೋರು ಮಾಡಿ ತೆಗೆಸಿದ್ದಾರೆ. ಅದು ನಮ್ಮ ಸಂಸ್ಕೃತಿ. ಉಳ್ಳಾಲದಲ್ಲಿ ಆದಾಗ ಸಹ ಅಲ್ಲಿನ ಸಮಿತಿಯವರು ಇದೇ ರೀತಿಯ ಉತ್ತಮ ಕಾರ್ಯ ಮಾಡಿದ್ದಾರೆ. ಇದಕ್ಕೆ ತಕ್ಷಣ ತಡೆ ಹಾಕಬೇಕು.
ಸಮಾಜದಲ್ಲಿ ವೈಮಸ್ಸಿಗೆ ಅವಕಾಶ ಮಾಡಿಕೊಡಬಾರದು. ಭಿತ್ತಿಪತ್ರ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಯು.ಟಿ ಖಾದರ್ ಆಗ್ರಹಿಸಿದರು.
ನಂತರ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಧಾರ್ಮಿಕ ಸೌಹಾರ್ದತೆ ಭಂಗ ಮಾಡುವ ಯಾವುದೇ ಸಮುದಾಯಕ್ಕೆ ಸರ್ಕಾರ ಪ್ರೋತ್ಸಾಹ ನೀಡಲ್ಲ. ಆಕಸ್ಮಿಕವಾಗಿ ಆದುದಕ್ಕೆ ಸರಕಾರವನ್ನು ಜವಾಬ್ದಾರಿ ಮಾಡಬಾರದು ಎಂದರು.
2002 ಹಿಂದೂ ಧಾರ್ಮಿಕ ದತ್ತಿ ಕಾನೂನು ಪ್ರಕಾರ ರೂಲ್ ನಂಬರ್ 12ರಲ್ಲಿ ಸಂಸ್ಥೆಯ ಜಮೀನು ಸಮೀಪ ಕಟ್ಟಡ ಅಥವಾ ನಿವೇಶನ ಸೇರಿದಂತೆ ಯಾವುದನ್ನೂ ಬೇರೆ ಧರ್ಮದವರಿಗೆ ಗುತ್ತಿಗೆ ನೀಡಲು ಅವಕಾಶವಿಲ್ಲ.
ಧಾರ್ಮಿಕ ಕ್ಷೇತ್ರದ ಜಮೀನಿನ ವ್ಯಾಪ್ತಿಯ ಹೊರಗೆ ಏನಾದರೂ ಕಾನೂನು ತೊಡಕುಂಟಾದರೆ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ರಾಜಿ ಇಲ್ಲ. 2002ರಲ್ಲಿ ಕಾಂಗ್ರೆಸ್ ಸರ್ಕಾರ ಇದನ್ನು ಜಾರಿಗೆ ತಂದಿದ್ದಾರೆ ಎಂದರು.