ಮಂಗಳೂರು: ಮಂಗಳೂರು ನಗರದ ಲಾರಿಯೊಂದು ಆಂಧ್ರಪ್ರದೇಶದಲ್ಲಿ ಅಪಘಾತಕ್ಕೀಡಾಗಿ ನಗರದ ಹೊರವಲಯದ ಉಳ್ಳಾಲ ಮೂಲದ ಯುವಕನೋರ್ವ ಮೃತಪಟ್ಟಿದ್ದಾನೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದರೆ, ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹರೇಕಳ ಐಕು ನಿವಾಸಿ ಮಹಮ್ಮದ್ ರವೂಫ್ (22) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪಾವೂರು ಹರೇಕಳ ನಿವಾಸಿ ಶಕೀರ್‌ಗೆ ತೀವ್ರವಾದ ಗಾಯಗಳಾದರೆ, ನಾಟೆಕಲ್‌ನ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆಂಧ್ರಪ್ರದೇಶದಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ಲಾರಿ ಮೂಲಕ ಒಡಿಶಾದಿಂದ ಮಂಗಳೂರಿಗೆ ಒಂದು ಲೋಡ್ ಮೀನು ತರಲಾಗುತ್ತಿತ್ತು. ಲಾರಿ ಒಡಿಶಾದ ಮೀನುಗಾರಿಕಾ ಬಂದರಿನಿಂದ ಹೊರಟು ಅಪಘಾತ ಸಂಭವಿಸಿದಾಗ ಸುಮಾರು 450 ಕಿ.ಮೀ ದೂರವನ್ನು ಕ್ರಮಿಸಿತ್ತು.
ಲಾರಿ ಶುಕ್ರವಾರ ನಗರ ಮಾರುಕಟ್ಟೆಯನ್ನು ತಲುಪುವ ನಿರೀಕ್ಷೆಯಿತ್ತು. ಮೃತರ ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ನಗರಕ್ಕೆ ತರಲು ಯೋಜಿಸಲಾಗಿದೆ. ಶುಕ್ರವಾರ ಮೃತ ದೇಹ ಮಂಗಳೂರು ತಲುಪುವ ನಿರೀಕ್ಷೆಯಿದೆ.