ಮಂಗಳೂರು: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಬಾಲಕನೋರ್ವನ ಶ್ವಾಸಕೋಶದೊಳಗಿದ್ದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಜೀವ ಉಳಿಸಿದ್ದಾರೆ.ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಪುತ್ರ ಮುಬಶ್ಶೀರ್ (12) ಶ್ವಾಸಕೋಶದಲ್ಲಿ ಗುಂಡುಸೂಜಿ ಪತ್ತೆಯಾಗಿರುವ ಬಾಲಕ.
ಗುಂಡುಸೂಜಿಯಿಂದಾಗಿ ಸುಮಾರು 15 ದಿನಗಳಿಂದ ಮುಬಶ್ಶೀರ್ ಗೆ ನಿರಂತರವಾಗಿ ಕೆಮ್ಮು, ಜ್ವರ ಬಾಧಿಸತೊಡಗಿತ್ತು. ಇದೊಂದು ಸಾಮಾನ್ಯ ರೋಗ ಲಕ್ಷಣವೆಂದು ಪರಿಗಣಿಸಿದ್ದ ಪೋಷಕರು ಕ್ಲಿನಿಕ್ನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಅಲ್ಪ ಪ್ರಮಾಣದ ಚೇತರಿಕೆ ಕಂಡುಬಂದರೂ ಕೆಮ್ಮು, ಜ್ವರ ಮತ್ತೆ ಆವರಿಸಿಕೊಳ್ಳತೊಡಗಿತು. ಕೊನೆಗೆ ಪೋಷಕರು ಆಸ್ಪತ್ರೆಯ ಕದ ತಟ್ಟಿದರು.
ಕಂಕನಾಡಿಯ ಮಕ್ಕಳ ತಜ್ಞ ಡಾ.ರಾಮ್ ಗೋಪಾಲ್ ಶಾಸ್ತ್ರಿ ಅವರಲ್ಲಿ ಮುಬಶ್ಶಿರ್ ನನ್ನು ಚಿಕಿತ್ಸೆಗೆ ದಾಖಲಿಸಲಾಯಿತು. ಅಲ್ಲಿ ಎಕ್ಸ್‌ರೇ ತೆಗೆಸಿದಾಗ ಶ್ವಾಸಕೋಶದಲ್ಲಿ ಗುಂಡುಸೂಜಿ ಇರುವುದು ಪತ್ತೆಯಾಗಿದೆ. ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಬಳಸಲಾಗುವ ಗುಂಡುಸೂಜಿ ಪತ್ತೆಯಾಗಿದೆ. ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡಲೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು.
ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು, ಬಾಲಕನಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲವೆಂದು ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಬುಧವಾರ ಇಡೀ ದಿನ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆದ ಬಾಲಕನನ್ನು ಗುರುವಾರ ಮನೆಗೆ ಕಳುಹಿಸಲಾಗಿದೆ.