ಶಾಪಿಂಗ್ಗೆ ಅಂತ ಮಾಲ್, ಸಿನಿಮಾ ಸುತ್ತಾಡೋ ಯುವತಿಯರೇ, ವಿದ್ಯಾರ್ಥಿನಿಯರೇ ಎಚ್ಚರ, ಎಚ್ಚರ. ಅಪರಿಚಿತರು ಯಾರಾದ್ರೂ ನಿಮಗೆ ಸಹಾಯ ಮಾಡೋದಾಗಿ ಮುಂದೆ ಬಂದ್ರೆ, ಅವರಿಂದ ದೂರಾನೇ ಇರಿ. ಪೂರ್ವಾಪರ ವಿಚಾರಿಸದೆ ಹೋದ್ರೋ, ವೇಶ್ಯಾವಾಟಿಕೆ ಜಾಲಕ್ಕೆ ಬೀಳೋದು ಗ್ಯಾರೆಂಟಿ.
ಅಪ್ರಾಪ್ತ ವಿದ್ಯಾರ್ಥಿನಿಯರನ್ನ ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ಮಾಡ್ತಿದ್ದ ಪ್ರಕರಣ, ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಕಳೆದ ತಿಂಗಳಷ್ಟೇ ನಂದಿಗುಡ್ಡ ರಿಯಾನ್ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಇದುವರೆಗೂ 16 ಜನ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ಇದೀಗ, ವೇಶ್ಯಾವಾಟಿಕೆ ಜಾಲ ಬಗೆದಷ್ಟು ತನ್ನ ಕರಾಳ ಮುಖವನ್ನ ಬಿಚ್ಚಿಡ್ತಿದ್ದು, ಹಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದೆ.
ದೌರ್ಬಲ್ಯಗಳೇ ಬಂಡವಾಳ..!!
ಈ ಪ್ರಕರಣದಲ್ಲಿ ಬಂಧಿತರಾಗಿರೋ ಪಿಂಪ್‌ಗಳು, ಬಡ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮಾಲ್, ಸಿನಿಮಾ, ಹೀಗೆ ಬೇರೆ ಕಡೆ ಸುತ್ತಾಡುವ ವಿದ್ಯಾರ್ಥಿನಿಯರನ್ನ ವೇಶ್ಯವಾಟಿಕೆ ಜಾಲದಲ್ಲಿ ಬೀಳಿಸಲು ಹಲವು ದಿನಗಳ ಕಾಲ ಹೊಂಚು ಹಾಕಿರೋದು ತನಿಖೆ ವೇಳೆ ಗೊತ್ತಾಗಿದೆ. ಮೊದಲಿಗೆ ಅವರ ಬೇಕು, ಬೇಡಗಳ ಬಗ್ಗೆ ಪಿಂಪ್‌ಗಳು ಗಮನಿಸ್ತಾರೆ. ಆಮೇಲೆ ಪರಿಚಯಸ್ಥರಂತೆ ವರ್ತಿಸುತ್ತಾರೆ, ಅದ್ರಲ್ಲಿ ಯಶಸ್ವಿಯಾದ್ರೆ ಮುಂದುವರಿಯುತ್ತಾರೆ.
ಆಮಿಷ ತೋರಿಸಿ ಬಲೆಗೆ..
ಬಡ ವಿದ್ಯಾರ್ಥಿನಿಯರ ದೌರ್ಬಲ್ಯಗಳನ್ನೇ ವೇಶ್ಯಾವಾಟಿಕೆ ಗ್ಯಾಂಗ್ ಬಂಡವಾಳ ಮಾಡಿಕೊಂಡಿರುತ್ತೆ. ಅವರ ಸಮಸ್ಯೆ ಇಲ್ಲವೇ ಸಹಾಯದ ಬಗ್ಗೆಯೂ ಮಾತು ಆರಂಭಿಸುತ್ತಾರೆ. ಹೆಣ್ಣು ಮಕ್ಕಳಿಗೆ ಹಿತವಾಗುವಂತೆ ಆತ್ಮೀಯವಾಗಿ ಮಾತಿಗಿಳಿದು ಅವರ ಸಂಪರ್ಕ ಸಾಧಿಸುತ್ತಾರೆ. ಮುಂದೆ ಗೆಳೆತನ ಸಾಧಿಸಿ ಕೆಲವೊಂದು ಸಹಾಯವನ್ನೂ ಪಿಂಪ್‌ಗಳು ಮಾಡುತ್ತಾರೆ. ಅಗತ್ಯವಿರೋ ಹಣ, ಬಟ್ಟೆ, ಗಿಫ್ಟ್ ನೀಡಿ ಸಹಾಯ ಮಾಡುವಂತೆ ನಟಿಸಿ ವಂಚಿಸುತ್ತಾರೆ. ಮಾಲ್, ಹೋಟೆಲ್ಗೆ ಕರೆದೊಯ್ದು ತಾವೇ ಎಲ್ಲ ಬಿಲ್‌ಗಳನ್ನು ಪಾವತಿಸ್ತಾರೆ.
ಅಮಾಯಕ ವಿದ್ಯಾರ್ಥಿಯನಿಯರಿಗೆ ಐಷಾರಾಮಿ ಜೀವನದ ರುಚಿ ಹಿಡಿಸುತ್ತಾರೆ. ಬಳಿಕ ಬಲೆಗೆ ಬಿದ್ದ ಹುಡುಗಿಯರ ಮೂಲಕ ಸಾಧ್ಯವಾದಷ್ಟು ಇತರೆ ವಿದ್ಯಾರ್ಥಿನಿಯರನ್ನ ತಮ್ಮ ತೆಕ್ಕೆಗೆ ಸೆಳೆಯಲು ತಂತ್ರ ಹೆಣೆಯುತ್ತಾರೆ. ಆಮೇಲೆ, ಬಾಲಕಿಯರ ಫೋಟೋ, ವೀಡಿಯೋ ತೆಗೆದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಆರಂಭಿಸುತ್ತಾರೆ
ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿತರಾಗಿರೋ ಆರೋಪಿಗಳು ಮೂಡುಬಿದಿರೆ, ಉಳ್ಳಾಲ, ಕಾಸರಗೋಡಿನವರಾಗಿದ್ದು, ವಿವಿಧ ರಾಜಕೀಯ ಮುಖಂಡರ ಸಹವರ್ತಿಗಳು, ಉದ್ಯಮಿಗಳಿದ್ದಾರೆ. ಸದ್ಯ, ಜಾಲದಲ್ಲಿ ಸಿಲುಕಿದ ಮತ್ತಷ್ಟು ಯುವತಿಯರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಮೇಲೂ ಸಿಸಿಬಿ ತೀವ್ರ ನಿಗಾ ಇರಿಸಿದೆ.