ಉಪ್ಪಿನಂಗಡಿ: ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರ ಕೃಪಾಶೀರ್ವಾದದೊಂದಿಗೆ ಕೂಟೇಲು ಹಳೆಗೇಟು ಬಳಿಯಿರುವ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುವ 36ನೇ ವರ್ಷದ ಹೊನಲು ಬೆಳಕಿನ ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೆ ಎ.2 ರಂದು ಬೆಳಿಗ್ಗೆ ಅದ್ದೂರಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಯು.ಪಿ. ಶಿವಾನಂದ ರವರು ದೇವಸ್ಥಾನದ ಮುಂಭಾಗದಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಕಂಬಳ ಕೋಣಗಳ ಯಜಮಾನರು, ನೇರಳೆ ರುಮಾಲ್ ತಲೆಗೆ ಧರಿಸಿದ ಕಂಬಳ ಸಮಿತಿಯ ಪದಾಧಿಕಾರಿಗಳು, ಹಲವಾರು ಕಂಬಳಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕಂಬಳ ಕರೆಯ ಬಳಿಯ ಮುಖ್ಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ದೀಪ ಬೆಳಗಿಸುವುದ ಮೂಲಕ ಕಂಬಳ ಕೂಟಕ್ಕೆ ಚಾಲನೆ ನೀಡಿದರು.
ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳ ಕೂಟವನ್ನು ನಡೆಸುವುದೆಂದರೆ ಸುಲಭದ ಮಾತಲ್ಲ. ಇಂದು ಕಂಬಳ ಉಳಿದಿದೆ ಎಂದರೆ ಅದಕ್ಕೆ ಉಪ್ಪಿನಂಗಡಿಯ ಕಂಬಳ ಸಮಿತಿ ಕಾರಣ. ಕಂಬಳದ ವಿರುದ್ಧ ನಿರ್ಬಂಧಗಳು ಬಂದಾಗ ಅದನ್ನು ನ್ಯಾಯಾಲಯದ ಮೂಲಕ ಹೋರಾಟ ಮಾಡಿದ್ದು ಉಪ್ಪಿನಂಗಡಿ ಕಂಬಳ ಸಮಿತಿ. ಇಲ್ಲಿನ ಕಂಬಳ ಕೂಟವನ್ನು ನಿಗದಿತ ಸಮಯದಲ್ಲಿ ಮುಗಿಸುವ ದೃಷ್ಟಿಕೋನವನ್ನಿಟ್ಟುಕೊಳ್ಳಲಾಗಿದೆ. ಆದ್ದರಿಂದ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.