ಮಂಗಳೂರು: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ತೆರಳಿದವರಿಂದ 2 ಲಕ್ಷ ರೂ. ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳ ಅಪರಾಧ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅವರಿಗೆ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅವರು 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಘಟನೆ ವಿವರ
ಮಂಗಳೂರು ಅಶೋಕ ನಗರದ ಚಿದಾನಂದ ಶೆಟ್ಟಿ ಅವರು ಹಳೆ ಇನ್ನೊವಾ ಕಾರು ಖರೀದಿಗೆ ಹುಡುಕಾಡುತ್ತಿದ್ದರು. ಇದನ್ನು ತಿಳಿದ ಕಿಲೆಂಜಾರಿನ ಸುಧೀರ್ ಎ೦ಬಾತ ಚಿದಾನಂದ ಶೆಟ್ಟಿ ಅವರಿಗೆ ಕರೆ ಮಾಡಿ ತಾನು ಅವಿನಾಶ್ ಎಂದು ಸುಳ್ಳು ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ನನ್ನ ಚಿಕ್ಕಪ್ಪನ ಹಳೆ ಕಾರು ಮಾರಾಟಕ್ಕಿದ್ದು, ಈ ಬಗ್ಗೆ ಮಾತನಾಡಲು ಸುರತ್ಕಲ್ ಬಳಿ ಬರುವಂತೆ ತಿಳಿಸಿದ್ದ.
ಅದರಂತೆ 2016ರ ಡಿ.23ರಂದು ಚಿದಾನಂದ ಶೆಟ್ಟಿ ಅವರು ಗೆಳೆಯ ಅಶ್ವಿತ್‌ನೊಂದಿಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದರು. ಅಲ್ಲಿಗೆ ಬಂದಿದ್ದ ಸುಧೀರ್ ಸಂಜೆ 6.30ಕ್ಕೆ ಮುಂಗಡ ಹಣ ತೆಗೆದುಕೊಂಡು ಕಾರ್ನಾಡ್ ಜಂಕ್ಷನ್‌ಗೆ ಬರುವಂತೆ ತಿಳಿಸಿದ್ದ. ಅದರಂತೆ 2016ರ ಡಿ.23ರಂದು ಚಿದಾನಂದ ಶೆಟ್ಟಿ ಅವರು ಅಶ್ವಿತ್‌ನೊಂದಿಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಅಲ್ಲಿ ಬಂದಿದ್ದ ಸುಧೀರ್ ಮುಂಗಡ ಹಣ ತೆಗೆದುಕೊಂಡು ಕಾರ್ನಾಡ್ ಜಂಕ್ಷನ್‌ಗೆ ಬರುವಂತೆ ತಿಳಿಸಿದ್ದ.
ಚಿದಾನಂದ ಶೆಟ್ಟಿ ಅವರು ಅಶ್ವಿತ್ ಮತ್ತು ಭರತ್ ಅವರೊಂದಿಗೆ ಕಾರಿನಲ್ಲಿ 2 ಲಕ್ಷ ರು. ಹಣ ಇಟ್ಟುಕೊಂಡು ಕಾರ್ನಾಡಿಗೆ ತೆರಳಿದ್ದರು. ಅನಂತರ ಸುಧೀರ್‌ನೊಂದಿಗೆ ಮಂಗಳೂರು ತಾಲೂಕು ತಾಳಿಪ್ಪಾಡಿ ಹೊಸಮನೆ ಎಂಬಲ್ಲಿಗೆ ಗುಡ್ಡ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಸುಧೀರ್ ಕಾರಿನಿಂದ ಇಳಿದು ಹೋಗಿ ‘ಚಿಕ್ಕಪ್ಪನ ಮನೆ ಇಲ್ಲಿಯೇ ಇದೆ.
ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ತೆರಳಿದ್ದ.
ಅದೇ ಸಮಯಕ್ಕೆ ಒಂದು ಕಾರು, ಸ್ಕೂಟರ್ ಮತ್ತು ಬೈಕ್‌ನಲ್ಲಿ ಆರೋಪಿಗಳಾದ ಕಿಲೆಂಜಾರು ಗ್ರಾಮದ ಶಿವಪ್ರಸಾದ್ ಆಲಿಯಾಸ್ ಅಯ್ಯಪ್ಪ (30), ಸಂದೀಪ್ ಬಿ.ಪೂಜಾರಿ (28), ಕಾರ್ತಿಕ್ ಶೆಟ್ಟಿ (27), ತೆಂಕ ಎರ್ಮಾಳಿನ ವರುಣ್ ಕುಮಾರ್ (26), ಹೆಜಮಾಡಿಯ ಸುವಿನ್ ಕಾಂಚನ್ ಆಲಿಯಾಸ್ ಮುನ್ನ (25),
ಪಡುಪೆರಾರದ ಗೋಪಾಲ ಗೌಡ(39) ಮತ್ತು ಕೊಡೆತ್ತೂರಿನ ಸುಜಿತ್ ಶೆಟ್ಟಿ ಹಾಗೂ ಸುಧೀರ್ ಸೇರಿಕೊಂಡು ತಲವಾರು, ಕಬ್ಬಿಣದ ರಾಡ್, ಕಬ್ಬಿಣದ ಪಂಚ್‌ಗಳೊಂದಿಗೆ ಬಂದು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ 2 ಲ.ರು. ಹಣವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಅಶ್ವಿತನಿಗೆ ಹಲ್ಲೆ ನಡೆಸಿದ್ದರು. ಅಶ್ವಿತ್ ತಪ್ಪಿಸಿಕೊಂಡಾಗ ಏಟು ಮೊಬೈಲ್‌ಗೆ ಬಿದ್ದಿತ್ತು. ಕಾರಿಗೆ ಹಾನಿಯಾಗಿತ್ತು.
ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಶೇರಿಗಾರ ವಾದಿಸಿದ್ದರು.