ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಕೋಮುಗಲಭೆ ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶವನ್ನು ಎನ್ ಐಎ ದಾಖಲಿಸಿರುವ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಆರೋಪಿಗಳನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ನಡೆಸುತ್ತಿದೆ.
ಸಮಾಜದಲ್ಲಿ ಭಯ ಹುಟ್ಟಿಸುವುದು, ಕೋಮುಗಲಭೆ ಸೃಷ್ಟಿಸುವುದು, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡುವಂತೆ ಮಾಡುವುದು ಆರೋಪಿಗಳ ಉದ್ದೇಶವಾಗಿತ್ತು. ವೈಯಕ್ತಿಕ ದ್ವೇಷ, ಹಳೆ ವೈಷಮ್ಯಕ್ಕಿಂತ ಈ ಅಂಶಗಳೇ ಆರೋಪಿಗಳಲ್ಲಿ ಮುಖ್ಯವಾಗಿ ಅಡಕವಾಗಿತ್ತು ಎಂಬುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ ಎಂಬುದಾಗಿ ವರದಿಯಾಗಿದೆ.
ಫೆ.20 ರಂದು ಶಿವಮೊಗ್ಗದ ಎನ್‌ಟಿ ರಸ್ತೆಯ ಕಾಮತ್ ಪೆಟ್ರೋಲ್ ಪಂಪ್ ಬಳಿ ಹರ್ಷ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಶಿವಮೊಗ್ಗದಾದ್ಯಂತ ಹಲವಾರು ಪ್ರತಿಭಟನೆಗಳು ನಡೆದಿದ್ದವು. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಅಧಿಕಾರಿಗಳು ನಗರದಾದ್ಯಂತ ಒಂದು ವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಅಲ್ಲದೆ, ಪ್ರಕರಣದ ತನಿಖೆಯನ್ನು ಎನ್ ಐಎಗೆ ಒಪ್ಪಿಸಲು ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್ ಐಎ ವಹಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ.