ಸುಳ್ಯ: ಹಿಂದೂ ಜಾಗರಣ ವೇದಿಕೆಯಿಂದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮಸೀದಿ ತೆರವಿಗೆ ಗಡು ನೀಡಿದ ಘಟನೆ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಗೂನಡ್ಕ ಬದ್ರಿಯಾ ಜುಮಾ ಮಸೀದಿ ವಿರುದ್ಧ ಅತಿಕ್ರಮಣದ ಆರೋಪ ಕೇಳಿ ಬಂದಿದ್ದು, ಸಂಪಾಜೆ ವಲಯ ಮೀಸಲು ಅರಣ್ಯದ ವ್ಯಾಪ್ತಿಗೆ ಬರುವ ಗೂನಡ್ಕ ಮಸೀದಿ ಸರ್ವೆ ನಂಬರ್ 81/1, 89/2, ಲಗ್ತಿ ಸರ್ವೆ ನಂಬರ್ 88/1 P 2 ರಲ್ಲಿ 20 ಸೆಂಟ್ಸ್ ಮೀಸಲು ಅರಣ್ಯ ಒತ್ತುವರಿ ಕ್ರಮ ಕಟ್ಟಡದ ಜೊತೆಗೆ ಹಲವು ಸಾಗುವಾಣಿ ಮರಗಳನ್ನು ಕಡಿಯಲಾಗಿತ್ತು.
2015 ರಲ್ಲಿ ಸ್ಥಳಿಯರು ಈ ಬಗ್ಗೆ ಗೂನಡ್ಕ ಮಸೀದಿ ವಿರುದ್ಧ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನಲೆಯಲ್ಲಿ ಎಸಿಎಫ್ ನ್ಯಾಯಾಲಯ ಅಕ್ರಮ ಕಟ್ಟಡ ತೆರವುಗೊಳಿಸುವಂತೆ 2017 ರಲ್ಲಿ ಆದೇಶ ನೀಡಿತ್ತು. ಸಿಸಿಎಫ್ ಕೋರ್ಟ್ ಕೂಡಾ 2018 ಎಸಿಎಫ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. 1 ತಿಂಗಳ ಒಳಗೆ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಆದೇಶ ನೀಡಲಾಗಿತ್ತು ಆದರೆ ಈವರೆಗೂ ತೆರವುಗೊಳಿಸಿಲ್ಲ ಎಂದು ಆರೋಪಿಸಲಾಗಿದೆ.
ಹಿಂದೂ ಜಾಗರಣ ವೇದಿಕೆಯಿಂದ ಅಕ್ರಮ ಕಟ್ಟಡ ತೆರವುಗೊಳಿಸಲು ಒತ್ತಾಯ ಮಾಡಿದ್ದು, ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ತೆರವು ಕಾರ್ಯಾಚರಣೆ ಸ್ಥಗಿತವಾಗಿದೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಾಗರಣ ವೇದಿಕೆ ಒತ್ತಾಯಿಸಿದ್ದು, ಎ. 11 ರ ಒಳಗೆ ಮಸೀದಿ ಕಟ್ಟಡ ತೆರವುಗೊಳಿಸಲು ಗಡು ನೀಡಿದ್ದೇವೆ ತೆರವುಗೊಳಿಸದೇ ಹೋದಲ್ಲಿ ಸುಳ್ಯ ಸಹಾಯಕ ಅರಣ್ಯ ಅಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.