ಬೆಂಗಳೂರು: ನಗರದ 4 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು ಇ-ಮೇಲ್ ಆಧರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅನಾಮಿಕ ಹೆಸರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ನಗರದ ಸೂಳಕುಂಟೆ ಬಳಿಯ ಡೆಲ್ಲಿ ಪಬ್ಲಿಕ್ ಶಾಲೆ ಮೇಲೂ ಬಂಬ್ ಬೆದರಿಕೆ ಇದ್ದು ಶಾಲೆಯ ಸುತ್ತ ಪೊಲೀಸರು ಜಮಾಯಿಸಿ ತನಿಖೆ ನಡೆಸುತ್ತಿದ್ದಾರೆ. ಶಾಲೆಯಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬಾಂಬ್ ನಿಗ್ರಹ ದಳ ಶೋಧ ನಡೆಸುತ್ತಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಪವರ್ಫುಲ್ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಹೀಗಾಗಿ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಯುತ್ತಿದೆ. ಮೆಟಲ್ ಡಿಟೆಕ್ಟರ್ ತಂಡದಿಂದಲೂ ಶಾಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ.
ಮಲಿಂದ ಬೊರೊನ್ ಇ-ಮೇಲ್ ಅಕೌಂಟ್ನಿಂದ ಮೇಲ್ ಬಂದಿದ್ದು ‘ದಿಸ್ ಇಸ್ ನಾಟ್ ಜೋಕ್’ ಎಂದು ವಾರ್ನಿಂಗ್ ಮಾಡಿದ್ದಾರೆ. ಇದು ತಮಾಷೆಯಲ್ಲ, ನಿಜವಾಗ್ಲೂ ಬಾಂಬ್ ಇಡಲಾಗಿದೆ. ತಡ ಮಾಡಬೇಡಿ, ನೂರಾರು ಜೀವ ಉಳಿಸಿ. ಎಲ್ಲವೂ ನಿಮ್ಮ ಕೈಯಲ್ಲಿ ಇಲ್ಲ ಎಂದು ಇ-ಮೇಲ್ ಮೂಲಕ ಬೆದರಿಸಲಾಗಿದೆ.
ಮೇಲ್ ಸಿಕ್ಕ ಬಳಿಕ ಶಾಲೆ ವಿದ್ಯಾರ್ಥಿಗಳನೆಲ್ಲ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು, ವಿಷಯ ತಿಳಿದು ಪೋಷಕರು ಶಾಲೆ ಬಳಿ ಓಡೋಡಿ ಬರುತ್ತಿದ್ದಾರೆ. ಮೇಲ್ ಮೂಲಕ 4 ಶಾಲೆಗಳಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದ್ದು, ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಕಾರಣ ಶಾಲೆ ಮಕ್ಕಳಿಗೆ ಆತಂಕಗೊಳಿಸದೇ ಪೊಲೀಸರು ಶೋಧ ನಡೆಸುತ್ತಿದ್ದಾರೆ.