ಕಡಬ: ಮದುವೆಯ ಮೊದಲೇ ಯುವತಿಯನ್ನು ಗರ್ಭಿಣಿಯನ್ನಾಗಿಸಿ, ನಂತರ ಮದುವೆಯಾಗಿ ನಿನಗೆ ಹುಟ್ಟಿದ ಮಗು ನನ್ನದಲ್ಲ, ನೀನು ವ್ಯಭಿಚಾರಿ ಎಂದು ನಿಂದಿಸಿ, ವರದಕ್ಷಿಣೆ ಕಿರುಕುಳ ನೀಡಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತ ಯುವಕನನ್ನು ದೀಕ್ಷಿತ್ ಎಂದು ಗುರುತಿಸಲಾಗಿದೆ.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೋರ್ವಳ ಸಂಬಂಧಿ ದೀಕ್ಷಿತ್ ಆಗಾಗ ಮನೆಗೆ ಬರುತ್ತಿದ್ದ. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಮುಂದೆ ಹೇಗೂ ಮದುವೆಯಾಗಲಿದ್ದೇವೆ ಎಂದು ನಂಬಿಸಿ ಆಕೆಯೊಂದಿಗೆ ರತಿಕ್ರೀಡೆ ನಡೆಸಿ, ಆತ ದೂರದೂರಿಗೆ ಕೆಲಸದ ನಿಮಿತ್ತ ತೆರಳಿದ್ದಾನೆ. ಪರಿಣಾಮ ಯುವತಿ ಗರ್ಭವತಿಯಾಗಿದ್ದಾಳೆ.
ಗರ್ಭಿಣಿಯಾದ ವಿಷಯ ಇಬ್ಬರ ಮನೆಯವರಿಗೆ ತಿಳಿದು ವಿವಾಹ ಮಾಡಲು ನಿರ್ಧರಿಸಿರುತ್ತಾರೆ. ಆಗ ದೀಕ್ಷಿತ್ ಆಕೆ ಗರ್ಭ ಧರಿಸಲು ತಾನೇ ಕಾರಣ ಹಾಗೂ ಆಕೆಯನ್ನು ವಿವಾಹವಾಗುತ್ತೇನೆ ಎಂದು ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಬರವಣಿಗೆ ಮುಖಾಂತರ ಒಪ್ಪಿ ಸಹಿ ಮಾಡಿ ಪತ್ರ ಕಳುಹಿಸಿರುತ್ತಾನೆ.
2021ರ ಆ.05 ರಂದು ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ನಂತರ 2021ರ ನ.15 ರಂದು ದೀಕ್ಷಿತ್ ಊರಿಗೆ ಬಂದು ಯುವತಿಯ ಮನೆಯವರೊಂದಿಗೆ ಮಾತುಕತೆಯಂತೆ ಪುತ್ತೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹವಾಗಿದ್ದಾನೆ.
ಮದುವೆಯಾದ ದಿನವೇ ದೀಕ್ಷಿತ್ ಮರಳಿ ಕರ್ತವ್ಯಕ್ಕೆ ತೆರಳಿದ್ದಾನೆ. ನಂತರದ ಆತ ದೂರವಾಣಿ ಕರೆ ಮಾಡಿ, ನಿನಗೆ ಹುಟ್ಟಿದ ಮಗು ನನ್ನದಲ್ಲ. ನೀನು ವ್ಯಭಿಚಾರಿ. ನಾನು ನಿನಗೆ ಡಿಎನ್ಎ ಟೆಸ್ಟ್ ಮಾಡಿಸುತ್ತೇನೆ. ನಿನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ನಿಂದಿಸಿ ವರದಕ್ಷಿಣೆ ಕೊಡಬೇಕು ಎಂದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.