ಬೆಂಗಳೂರು: ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಹೆಚ್ಚಾಗಿದ್ದ ಮಳೆಯ ಅಬ್ಬರ ಇಂದಿನಿಂದ ಕಡಿಮೆಯಾಗುತ್ತಿದೆ. 15 ದಿನಗಳಿಂದ ಮಲೆನಾಡು, ಕರಾವಳಿ ದಾವಣಗೆರೆ, ಬೆಂಗಳೂರು, ಮೈಸೂರು, ಹಾಸನ, ಕೊಡಗಿನಲ್ಲಿ ಗುಡುಗು ಸಹಿತ ಮಳೆಯ ಆರ್ಭಟ (Heavy Rainfall) ಜೋರಾಗಿತ್ತು. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆ ಕರ್ನಾಟಕದಲ್ಲೂ ಮಳೆಯಾಗಿತ್ತು. ಆದರೂ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಇನ್ನೂ 2ರಿಂದ 3 ದಿನ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ.
ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದರೂ ಕೇರಳದಲ್ಲಿ ಏ. 14ರವರೆಗೂ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹಳದಿ ಅಲರ್ಟ್ (Yellow Alert) ಕೂಡ ಘೋಷಿಸಲಾಗಿದೆ.
ಕೇರಳದ ಪಥನಾಂತಿಟ್ಟ, ಇಡುಕ್ಕಿ, ತಿರುವನಂತಪುರಂ, ಕೊಲ್ಲಂನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಅರುಣಾಚಲ ಪ್ರದೇಶ, ಹಿಮಾಲಯ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ತ್ರಿಪುರದಲ್ಲಿ ಸಾಧಾರಣ ಮಳೆಯಾಗಲಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಲಕ್ಷದ್ವೀಪದ ಕೆಲವು ಪ್ರದೇಶಗಳಲ್ಲಿ ಕೂಡ ತುಂತುರು ಮಳೆಯಾಗಲಿದೆ.