ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಂದು ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು.
ಕಾಂಗ್ರೆಸ್ ಭವನದಿಂದ ಸಿಎಂ ಗೃಹ ಕಚೇರಿ ಕೃಷ್ಣಗೆ ಹೊರಟ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ, ರಣದೀಪ್ ಸುರ್ಜೇವಾಲ ಸೇರಿದಂತೆ ಹಲವು ಕಾರ್ಯಕರ್ತರನ್ನು ರೇಸ್ ಕೋರ್ಸ್ ಬಳಿಯೇ ಪೊಲೀಸರು ತಡೆದರು.
ಇದೇ ವೇಳೆ ಬ್ಯಾರಿಕೇಡ್ ಮೇಲೆ ಜಿಗಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸುರ್ಜೇವಾಲಾ, ಸಲೀಂ ಅಹಮದ್ ಮುಂದೆ ಸಾಗಿದರು. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆಯಿತು. ಸಿಎಂ ನಿವಾಸ ತಲುಪುವ ಮೊದಲೇ ಪ್ರತಿಭಟನಾಕಾರರನ್ನು ಬ್ಯಾರಿಕೇಡ್ ಹಾಕಿ ಮುಂದೆ ಹೋಗದಂತೆ ತಡೆದ ಪೊಲೀಸರು, ಕೈ ನಾಯಕರನ್ನ ವಶಕ್ಕೆ ಪಡೆದರು.
ಮೃತನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡಬೇಕು. ನಮ್ಮ ಕಾಂಗ್ರೆಸ್ ಪಕ್ಷದಿಂದ 11 ಲಕ್ಷ ರೂ. ಪರಿಹಾರ ಕೊಡ್ತೀವಿ. ಸರ್ಕಾರ ಕೆಲಸ ಕೊಡುವವರೆಗೂ ನಮ್ಮ ಆ ಭಾಗದ ನಾಯಕರು ಸಂತೋಷ್ ಪತ್ನಿಗೆ ಕೆಲಸ ಕೊಡ್ತಾರೆ. ಭ್ರಷ್ಟಾಚಾರದ ನಿಗ್ರಹ ಕಾಯ್ದೆಯಡಿ ದೂರು ದಾಖಲು ಆಗಬೇಕು. ಸಿಎಂ ಅವರು ಈಶ್ವರಪ್ಪ ಅವರನ್ನ ರಕ್ಷಣೆ ಮಾಡ್ತಿದ್ದಾರೆ. ಅವರ ಮೇಲೂ ಕೆಂಪಣ್ಣ ಕಮಿಷನ್ ಆರೋಪ ಮಾಡಿದ್ದಾರೆ.
ಮಾನ ಮರ್ಯಾದೆ ಇದ್ದಿದ್ದರೆ ಈಶ್ವರಪ್ಪ ರಾಜೀನಾಮೆ ಕೊಡ್ತಿದ್ರು. ಬಿಜೆಪಿ ಅವರು ಭಂಡರು, ರಾಜೀನಾಮೆ ಕೊಡಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.