ಮಂಗಳೂರು: ದುಬಾರಿ ವಾಚ್‌ವೊಂದನ್ನು ಕದ್ದ ಆರೋಪದ ಮೇಲೆ ಬಂಧನ ಮಾಡಲು ತೆರಳಿದ್ದ ಕೊಣಾಜೆ ಠಾಣೆಯ ಪಿಎಸ್ಐ ಶರಣಪ್ಪ ಅವರಿಗೆ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಸಾಲೆತ್ತೂರು, ಕಾಡುಮಠ ನಿವಾಸಿ ಮುಹಮ್ಮದ್ ಸಾದಿಕ್ (23) ಬಂಧಿತ ಆರೋಪಿ.
ನಗರದ ಬಂದರು ಠಾಣೆ ವ್ಯಾಪ್ತಿಯಲ್ಲಿ ಬೆಳೆ ಬಾಳುವ ವಾಚ್ ಕಳವು ನಡೆದಿತ್ತು. ಕೃತ್ಯ ನಡೆಸಿದ ಆರೋಪಿ ಸಾದಿಕ್ ನಟೋರಿಯಸ್ ಆಗಿದ್ದು ಈ ಹಿಂದೆ ಕೂಡಾ ತನ್ನನ್ನ ಬಂಧಿಸಲು ತೆರಳಿದ್ದ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿ ವಿನೋದ್ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ.
ಕಳೆದ ಮಾ. 23ರ ರಾತ್ರಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಾದಿಕ್ ಕೊಣಾಜೆ ಠಾಣೆ ವ್ಯಾಪ್ತಿಯ ಅರ್ಕಾಣ ಎಂಬಲ್ಲಿ ಇರುವ ಬಗ್ಗೆ ಪೊಲೀಸರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ ಸಾದಿಕ್ ಬಂಧನಕ್ಕೆ ತೆರಳಿದ್ದರು.
ಈ ವೇಳೆ ಸಾದಿಕ್ ಪಿಎಸ್ಐಗೆ ಇರಿದು ಪರಾರಿಯಾಗಿದ್ದು, ಸಾದಿಕ್ ಪರಾರಿಯಾಗಲು ಸಹಕರಿಸಿದ್ದ ಆತನ ಸಹೋದರ ನಾಸಿರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಬೆಂಗಳೂರಿನಲ್ಲಿ ಎಚ್ಎಸ್ಆರ್ ಲೇಔಟ್‌ನಲ್ಲಿ ಸಾದಿಕ್ ಸ್ನೇಹಿತನೊಂದಿಗೆ ಆಟಿಕೆ ಗೊಂಬೆಗಳನ್ನು ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಸಾಧಿಕ್ ನನ್ನು ಬಂಧಿಸಿದ್ದಾರೆ.
ಎಸಿಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಣಾಜೆ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ಪಿಎಸ್ಐ ಶರಣಪ್ಪ ಭಂಡಾರಿ, ಸಿಬ್ಬಂದಿ ಅಶೋಕ್, ಶಿವ, ಪುರುಷೋತ್ತಮ್, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.