ಮಂಗಳೂರು: ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯೇ ತನ್ನ ಮೇಲೆಯೇ ಸಂಶಯಪಟ್ಟು ಪೊಲೀಸ್ ಕಂಪ್ಲೈಂಟ್ ಕೊಡಿಸಿ ಎಲ್ಲರ ಮುಂದೆ ಮರ್ಯಾದಿ ತೆಗೆದಿದ್ದಾಳೆಂದು ಆರೋಪಿಸಿ ಜಿಗುಪ್ಸೆಗೊಂಡು ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಯತ್ನಿಸಿದ ಯುವಕ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಮನವೊಲಿಕೆಯಿಂದ ಕೆಳಗಿಳಿದ ಆತಂಕಕಾರಿ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಫರಂಗಿಪೇಟೆಯ ಕೊಡ್ಮಾಣ್‌ನ ಸುಧೀರ್ (32) ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ದಿನಕಳೆದಂತೆ ಈಕೆಯ ಮೇಲಿನ ಒಲವು ಕಮ್ಮಿಯಾಗಿ ಮತ್ತೊಬ್ಬಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ ಎಂದು ಆತನ ಮೊದಲ ಪ್ರೇಯಸಿ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದಳು.
ತನ್ನ ಅನಾರೋಗ್ಯಕ್ಕೆ ಪ್ರೀತಿಸುತ್ತಿದ್ದ ಹುಡುಗನೇ ಕಾರಣ ಎಂದು ಮನೆಯವರ ಬಳಿ ದೂರಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಮನೆಯವರು ಸುಧೀರ್ ವಿರುದ್ದ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ತನ್ನ ಊರಿನಲ್ಲಿ, ಫ್ರೆಂಡ್ಸ್ ಮುಂದೆ ತನ್ನ ಮಾನ ಮರ್ಯಾದೆ ಕಳೆದ್ಳು ಎಂದು ಮಾನಸಿಕವಾಗಿ ನೊಂದು ಸಾಯಬೇಕೆಂದುಕೊಂಡಾಗ ಆತನಿಗೆ ಕಾಣಿಸಿದ್ದು ಮೊಬೈಲ್ ಟವರ್, ಅಲ್ಲಿಂದ ಬಿದ್ದು ಸತ್ತರೆ ತನಗೆ ಮುಕ್ತಿ ಸಿಗುತ್ತದೆ ಅಂದುಕೊಂಡ ಸುಧೀರ್ ಬೆಳ್ಳಂ ಬೆಳಗ್ಗೆ ತನ್ನ ಬ್ಯಾಗ್ ಜೊತೆ ಒಂದು ಬಾಟ್ಲಿ ನೀರಿನ ಜೊತೆ ಅಡ್ಯಾರ್‌ನಲ್ಲಿರುವ ಟವರ್ ಮೇಲೇರಿದ್ದಾನೆ.
ಮೇಲೇರಿದ ಈತ ತನ್ನ ಹುಡುಗಿಗೆ ತಾನು ಸಾಯ್ತನೆಂದು ಪೋನ್ ಮಾಡಿ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ ಪೊಲೀಸರು ಟವರ್ ಬಳಿ ಬಂದಿದ್ದಾರೆ. ಕೆಳಗಿನಿಂದಲೇ ಸುಧೀರ್‌ನನ್ನು ಮನವೊಲಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಮಾತಿಗೆ ಹೆದರಿದ ಯುವಕ ಟವರ್‌ನಿಂದ ಕೆಳಗಿಳಿದಿದ್ದ, ಘಟನಾ ಸ್ಥಳಕ್ಕೆ ಆತನ ಪ್ರೇಯಸಿ ಕೂಡಾ ಬಂದಿದ್ದಳು. ಸದ್ಯ ಯುವಕನನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.