ಪುತ್ತೂರು: ಯುವಕನೋರ್ವ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರಿನ ಬೋರ್‌ವೆಲ್ ಸಂಸ್ಥೆಯ ಮಾಲಕಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏ. 16ರಂದು ಪುತ್ತೂರು ಬ್ರಹ್ಮರಥೋತ್ಸವದ ಪ್ರಯುಕ್ತ ಪುತ್ತೂರಿನ ಬೋರ್‌ವೆಲ್ ಸಂಸ್ಥೆಯೊಂದರ ವತಿಯಿಂದ ರಥಬೀದಿ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿತ್ತು. ಸಂಸ್ಥೆಯ ಮಾಲಕಿ ಕೂಡಾ ಅಲ್ಲೇ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕೌಡಿಚ್ಚಾರ್ ನ ನಿತೇಶ್ ಎಂಬವರು ಮೊಬೈಲ್ ಫೋನ್ ಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟದ್ದಲ್ಲದೆ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದುದರ ಪರಿಣಾಮವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಸಂಸ್ಥೆಯ ಮಾಲಕಿ ನ್ಯಾಯ ಕೋರಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆಯೂ ಅನೇಕ ಬಾರಿ ಫೋನ್ ಕರೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ ಈತ ಹಣ ನೀಡದಿದ್ದರೆ ನಿನ್ನ ಇಡೀ ಜಾತಕ ಪ್ರಚಾರ ಮಾಡುತ್ತೇನೆ ಎಂದು ಹೇಳಿ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಮಾಲಕಿ ದೂರಿನಲ್ಲಿ ತಿಳಿಸಿದ್ದಾರೆ.
ಫೋನ್‌ನಲ್ಲಿ ಮಾತನಾಡಲು ಸಾಧ್ಯವಾಗದೇ ಕರೆ ಸ್ವೀಕರಿಸದಿದ್ದಾಗಲೂ ಮತ್ತೆ ಮತ್ತೆ ಫೋನ್ ಮಾಡಿ ಒತ್ತಾಯಪೂರ್ವಕವಾಗಿ ಮಾತನಾಡಿ ಚಾರಿತ್ರ್ಯಹರಣ ಮಾಡುವ ರೀತಿಯಲ್ಲಿ ಪದಬಳಕೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.