ಹಾವೇರಿ: ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಕಾಲು ತಾಗಿದ್ದಕ್ಕೆ ಚಿತ್ರಮಂದಿರದಲ್ಲೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಯುವಕನೊರ್ವ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದಿದೆ.
ಗಾಯಗೊಂಡವನನ್ನ ವಸಂತಕುಮಾರ ಶಿವಪುರ (27) ಎಂದು ಗುರುತಿಸಲಾಗಿದೆ.
ಯುವಕನ ಹೊಟ್ಟೆಯ ಭಾಗ ಮತ್ತು ಕಾಲಿಗೆ ಗುಂಡು ತಗುಲಿದೆ. ದುಷ್ಕರ್ಮಿಯೋರ್ವ ತನ್ನ ರಿವಾಲ್ವಾರ್ ನಿಂದ ಮೂರು ಸುತ್ತು ಯುವಕನ ಮೇಲೆ ಗುಂಡು ಹಾರಿಸಿದ್ದಾನೆ.
ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುವಿಗೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಎಸ್ಪಿ ಹನುಮಂತರಾಯ ಖಚಿತಪಡಿಸಿದ್ದಾರೆ. ಚಿತ್ರವೀಕ್ಷಣೆ ವೇಳೆ ಕಾಲು ತಗುಲಿದೆ ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಬಳಿಕ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.