ಬೇಸಿಗೆಯ ಕಾಲ ಆರಂಭವಾಗಿದೆ, ಸೂರ್ಯ ತನ್ನ ಪ್ರಖರಣ ಕಿರಣಗಳಿಂದ ನೆತ್ತಿ ಸುಡಲು ಆರಂಭಿಸಿದ್ದಾನೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಇದರಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಜೀರ್ಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಆರೋಗ್ಯವಂತರಾಗಿರಲು ದೇಹಕ್ಕೆ ಶಕ್ತಿ ನೀಡುವಂತಹ ಆಹಾರ ಪಾನೀಯಗಳ ಸೇವನೆ ಬಗ್ಗೆ ಅರಿವು ಹೊಂದುವುದು ಅಗತ್ಯ.
ಶರೀರಕ್ಕೆ ತೇವಾಂಶ ಭರಿತ ಹಣ್ಣು ಮತ್ತು ತರಕಾರಿ: ಬೇಸಿಗೆಯಲ್ಲಿ ನೀರಿನಾಂಶವು ಅಧಿಕವಾಗಿ ದೇಹಕ್ಕೆ ಬೇಕಾಗುತ್ತದೆ. ನೀರು ದೇಹವನ್ನು ತಾಜಾವಾಗಿಡಲು ಸಹಾಯಕಾರಿಯಾಗಿದೆ. ಇದರ ಜೊತೆಯಲ್ಲಿ ನೀರಿನಾಂಶ ಹೆಚ್ಚು ಹೊಂದಿರುವಂತಹ ತರಕಾರಿ ಮತ್ತು ಹಣ್ಣುಗಳ ಸೇವನೆಯೂ ಅಷ್ಟೇ ಮುಖ್ಯ. ಸೌತೆಕಾಯಿ ಶೇ.97ರಷ್ಟು ನೀರನ್ನು ಹೊಂದಿದ್ದು, ದೇಹದ ತೇವಾಂಶ ಕಾಯ್ದಿರಿಸಿ, ತಂಪಾಗಿಡುತ್ತದೆ. ಟೊಮೆಟೋ ಎಲ್ಲಾ ಸಮಯದಲ್ಲೂ ದೊರೆಯುವಂತ ತರಕಾರಿಯಾಗಿದ್ದು, ಇದರಲ್ಲಿರುವ ಪೌಷ್ಠಿಕಾಂಶ ಮತ್ತು ಲಿಕೊಪೇನ್ ಎಂಬ ಉತ್ಕರ್ಷಣ ಅಂಶವು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಕ್ಯಾಪ್ಸಿಕಂ ಹೇರಳ ನೀರಿನಾಂಶ ಹೊಂದಿರುವ ತರಕಾರಿಯಾಗಿದೆ. ಕೆಂಪು ಮತ್ತು ಹಳದಿ ಕ್ಯಾಪ್ಸಿಕಂಗಿಂತ ಹಸಿರು ಕ್ಯಾಪ್ಸಿಕಂನಲ್ಲಿ ಹೆಚ್ಚು ನೀರಿನಾಂಶವಿರುತ್ತದೆ. ಇದನ್ನು ಗ್ರೇವಿ, ಸಲಾಡ್ ರೀತಿಯಲ್ಲಿ ಸೇವಿಸಬಹುದು. ಹಣ್ಣಿನಲ್ಲಿ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಪ್ಪದೆ ಸೇವಿಸಬೇಕಾದಂತಹ ಹಣ್ಣು ಆಗಿದ್ದು, ಇದರಲ್ಲಿ ನೀರಿನ ಅಂಶವೇ ಹೆಚ್ಚು ಇರುವುದರಿಂದ ದೇಹಕ್ಕೆ ತಂಪು ನೀಡುತ್ತದೆ. ಸ್ವಲ್ಪವೇ ಕರಬೂಜ ಹಣ್ಣನ್ನು ತಿಂದರೂ ದಿನಕ್ಕೆ ಬೇಕಾಗುವಷ್ಟು ವಿಟಮಿನ್ ಸಿ, ಎ ಮತ್ತು 50 ರಷ್ಟು ಕ್ಯಾಲೋರಿ ದೊರಕುತ್ತದೆ.
ಪಾನೀಯ ಸೇವನೆ: ಬಿಸಿಲಿನ ತಾಪದಿಂದ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಇರುವಂತೆ ನೋಡಿಕೊಳ್ಳಲು ಹೆಚ್ಚು, ಹೆಚ್ಚು ನೀರು ಕುಡಿಯುವುದರೊಂದಿಗೆ ಬೇಸಿಗೆಯ ಧಗೆಯನ್ನು ನೀಗಲು ಎಳನೀರು ಅಮೃತ ಸಮಾನವಾದ ಪಾನೀಯ. ಇದರಲ್ಲಿ ವಿವಿಧ ಖನಿಜ, ಲವಣ ಮತ್ತು ಸೈಟೋಕೈನ್, ಲಾರಿಕ್ ಆಮ್ಲ ಎಂಬ ಎರಡು ಪೋಷಕಾಂಶಗಳಿವೆ. ಇವು ಜೀವಕೋಶದ ಸಮರ್ಪಕ ಬೆಳವಣಿಗೆಗೆ ಸಹಕಾರಿ. ಅಲ್ಲದೆ ಇದು ದಣಿವು ನಿಯಂತ್ರಿಸಿ ದೈಹಿಕ ಶ್ರಮವುಳ್ಳ ಕೆಲಸವನ್ನು ಮಾಡುವುದಕ್ಕೆ ಶಕ್ತಿ ನೀಡುತ್ತದೆ. ಪ್ರತಿದಿನ ಬೆಳಿಗ್ಗೆ ಎಳನೀರು ಕುಡಿಯುವುದರಿಂದ ಆರೋಗ್ಯವಾಗಿ ಇರಬಹುದು.
ದ್ರಾಕ್ಷಿ ಹಣ್ಣಿನ ಸೇವನೆಯಿಂದ ವಿಟಮಿನ್ ಸಿ, ಬಿ, ಕಬ್ಬಿಣದ ಸತ್ವವಿದ್ದು, ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು, ಕಪ್ಪು, ಕೆಂಪು ಜೊತೆಗೆ ಒಣದ್ರಾಕ್ಷಿ ನಿತ್ಯ ಸೇವಿಸಿದರೆ ಹೊಟ್ಟೆ ಉರಿ, ಕಣ್ಣು ಉರಿ ಕಡಿಮೆ ಆಗುತ್ತದೆ. ಹುಳಿ ದ್ರಾಕ್ಷಿ ಹಣ್ಣು ಮಿತವಾಗಿ ಸೇವಿಸುವುದರಿಂದ ಅಜೀರ್ಣ ಗುಣವಾಗುತ್ತದೆ. ಬೇಸಿಗೆ ಬಂದರೆ ಮಾವಿನ ಹಣ್ಣುಗಳದ್ದೇ ಕಾರುಬಾರು. ಇದರಲ್ಲಿ ವಿಟಮಿನ್ ಬಿ, ಸಿ ಹಾಗೂ ವಿಟಮಿನ್ ಎ ಹೆಚ್ಚಾಗಿದೆ. ಇದು ಜೀರ್ಣ ಪ್ರಕ್ರಿಯೆಗೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಕಣ್ಣಿನ ಸಮಸ್ಯೆ ಎಂದಾಕ್ಷಣ ಕ್ಯಾರೆಟ್ ತಿನ್ನುವುದರಿಂದಲ್ಲೂ ನಮ್ಮ ದೃಷ್ಠಿಯ ಶಕ್ತಿಯನ್ನು ವೃದ್ಧಿಸಲು ಸಹಕಾರಿ ಮತ್ತು ಕಣ್ಣಿನ ಪೊರೆ ಬರದಂತೆ ರಕ್ಷಿಸುವ ಕಾರ್ಯವನ್ನು ಕ್ಯಾರೆಟ್ ಮಾಡುತ್ತದೆ. ಇನ್ನಿತರೆ ಪಾನೀಯವಾದ ನಿಂಬೆಪಾನಕ, ಮಜ್ಜಿಗೆ, ಲಸ್ಸಿ ಮುಂತಾದ ಪಾನೀಯ ಪದಾರ್ಥಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ತಂಪು ಹಾಗೂ ಶಕ್ತಿಯನ್ನು ನೀಡುತ್ತದೆ.
ಸೇವಿಸಬೇಕಾದ ಆಹಾರ: ಬೇಸಿಗೆಯಲ್ಲಿ ಬೇಗ ಜೀರ್ಣವಾಗುವ ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಬೇಕು. ಅಂದರೆ ಅತಿಯಾದ ಖಾರ, ಹುಳಿರಸಗಳ ಸೇವನೆ, ಜಿಡ್ಡಿನ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಕಾಫಿ, ಟೀ, ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಅತಿಯಾಗಿ ಸೇವಿಸಬಾರದು. ಸೋಡ, ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಉಪಯೋಗಿಸುವುದರಿಂದ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು.