ಮಂಗಳೂರು: ಕೊರೊನಾ ನಿಯಂತ್ರಣಕ್ಕೆ ಜಾರಿಗೆತಂದಿರುವ ನಿಯಮಗಳನ್ನು ಉಲ್ಲಂಘಿಸುವ ಸ್ಥಳಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ನಗರದ ಜನರಿಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಸಾರ್ವಜನಿಕ ಜಾಗಗಳು, ಬಸ್ ಇನ್ನಿತರ ಸಾರಿಗೆ ವಾಹನಗಳು, ಮಾಲ್ ಗಳಿಗೆ ತೆರಳಿ ಕೊರೊನಾ ಎಚ್ಚರಿಕೆಯ ಛಾಟಿ ಬೀಸಿದ್ದಾರೆ.ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯ ಪ್ರಮುಖ ಇಲಾಖೆಯ ಅಧಿಕಾರಿಗಳು ದಿನದಲ್ಲಿ ಒಂದು ಗಂಟೆ ಕಾಲ ಫೀಲ್ಡ್ ಗೆ ಇಳಿಯಬೇಕು ಎಂದು ಜಿಲ್ಲಾಧಿಕಾರಿಗಳು ಕಳೆದ ವಾರ ಸೂಚನೆ ನೀಡಿದ್ದರು.
ಹೊಸ ರೀತಿಯ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳೇ ಚಾಲನೆ ನೀಡಿದ್ದು ದಿಢೀರ್ ಆಗಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿ ನಡೆಯುತ್ತಾ ಹೋಗಿದ್ದಾರೆ. ಇವರ ಕಾರ್ಯಾಚರಣೆಗೆ ಡಿಸಿಪಿ ಹರಿರಾಮ್ ಶಂಕರ್ ಸಾಥ್ ನೀಡಿದ್ದಾರೆ.
ಅಂಗಡಿಗಳಲ್ಲಿ ವ್ಯಾಪಾರಸ್ಥರು, ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಎದುರಿಗೆ ಸಿಕ್ಕವರಿಗೆ ಗದರುತ್ತಾ ಸಾಗಿದ್ದಾರೆ. ಯಾಕಪ್ಪಾ ಮಾಸ್ಕ್ ಹಾಕಿಲ್ಲಾ, ಕೊರೊನಾ ಇರೋದು ಗೊತ್ತಿಲ್ವಾ ಎಂದು ಗದರಿದ್ದಾರೆ. ಬಳಿಕ ಸಿಟಿ ಸೆಂಟರ್ ಮಾಲ್ ಗೆ ತೆರಳಿದ ಜಿಲ್ಲಾಧಿಕಾರಿಗಳು ಅಲ್ಲಿ ಸಿಬಂದಿಯೇ ಮಾಸ್ಕ್ ಹಾಕಿರದೇ ಇದ್ದುದನ್ನು ಗಮನಿಸಿ, ಶಟರ್ ಎಳೆದು ಬಂದ್ ಮಾಡುವಂತೆ ಸೂಚಿಸಿದ್ದಾರೆ.
ಸಾರಿಗೆ ಬಸ್ಸಿಗೂ ಏರಿಹೋದ ಜಿಲ್ಲಾಧಿಕಾರಿ,ಮಾಸ್ಕನ್ನು ಗಲ್ಲಕ್ಕೆ ತಗಲಿಸಿಕೊಂಡಿದ್ದ ಪ್ರಯಾಣಿಕರನ್ನು ಗದರಿಸಿದ್ದಾರೆ. ಮೊದಲ ದಿನವಾಗಿದ್ದರಿಂದ ಫೈನ್ ಹಾಕೋದಿಲ್ಲ. ಬಸ್ಸಿನಲ್ಲಿ ಪ್ರಯಾಣಿಕರು ಮಾಸ್ಕ್ ಹಾಕಿಲ್ಲಾಂದ್ರೆ ಕಂಡಕ್ಟರ್ ಮತ್ತು ಚಾಲಕನಿಗೆ ದಂಡ ವಿಧಿಸುವುದಾಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ರಸ್ತೆಯುದ್ದಕ್ಕೂ ನಡೆದು ಹೋಗಿದ್ದಾರೆ.. ಜನರಲ್ಲಿ ಜಾಗೃತಿಮೂಡಿಸಲು ಸ್ವತಃ ಜಿಲ್ಲಾಧಿಕಾರಿಗಳೇ ಫೀಲ್ಡ್ ಗೆ ಇಳಿದಿದ್ದು, ಪ್ರಶಂಸೆಗೆ ಪಾತ್ರವಾಗಿದೆ.