ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ ನಿಂದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕಿಡಿಗೇಡಿಗಳ ಕುಟುಂಬಕ್ಕೆ ಸಹಾಯ ಮಾಡಲು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾಗಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರೋ ಕುಟುಂಬದ ಸದಸ್ಯರಿಗೆ ರಂಜಾನ್ ಹಬ್ಬ ಹಿನ್ನೆಲೆ ಸಹಾಯ ಮಾಡಲು ಮಾಜಿ ಸಚಿವ ಜಮೀರ್ ಅಹ್ಮದ್ ತಯಾರಿ ನಡೆಸಿದ್ದಾರೆ. ಆದರೇ ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಅನೇಕರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಹಣ ಕೊಡುವುದು ಎಷ್ಟು ಸರಿ..?? ಗಲಭೆ ಪ್ರಕರಣದಲ್ಲಿ ಬಂಧಿತರಾದವರಿಗೆ ಸಹಾಯ ಮಾಡಬಾರದು. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಾಟೆ ಆದಾಗಲೂ ಬಂಧಿತ ಆರೋಪಿಗಳಿಗೆ ಶಾಸಕ ಜಮೀರ್ ನೆರವು ನೀಡಿದ್ದರು. ಇದು ಗಲಭೆಕೋರರಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗುತ್ತದೆ ಎಂದೆಲ್ಲಾ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹಾಗೂ ವಿರೋಧ ವ್ಯಕ್ತವಾಗುತ್ತಿದೆ.
ಜಮೀರ್ ಅಹ್ಮದ್ ಗಲಭೆ ಪ್ರಕರಣದಲ್ಲಿ ಬಂಧಿತರಾದವರ ಪ್ರತಿ ಕುಟುಂಬಕ್ಕೂ ಫುಡ್ ಕಿಟ್ ಹಾಗೂ 5 ಸಾವಿರ ಧನ ಸಹಾಯ ಮಾಡಲಿದ್ದಾರೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನಲೆಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆಗೆ ಕಷ್ಟ ಆಗಬಾರದು, ಕುಟುಂಬದಲ್ಲಿ ದುಃಖವಿರಬಾರದು ಎಂದು ತಾಯಂದಿರಿಗೆ, ಹೆಣ್ಣುಮಕ್ಕಳಿಗೆ, ಪುಟ್ಟ ಮಕ್ಕಳಿಗೆ ಸಹಾಯ ಮಾಡ್ತಿದ್ದೀವಿ ಅಂತ ಜಮೀರ್ ಅಹ್ಮದ್ ಸಂದೇಶ ರವಾನಿಸಿದ್ದಾರೆ.