ಕಾರ್ಕಳ: ಮದುವೆ ಮನೆಯಲ್ಲಿಯೇ ಚಿನ್ನದ ಸರವನ್ನು ಎಗರಿಸಿರುವ ಘಟನೆ ಕಾರ್ಕಳದ ಪಳ್ಳಿ ಗ್ರಾಮದ ಕೃಷ್ಣ ಹಾಲ್ ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾರ್ಕಳ ಡಿಂಬೊಟ್ಟು ನಿವಾಸಿ ಸುರೇಶ್ ಪೂಜಾರಿ ಎನ್ನಲಾಗಿದೆ.

ಬೆಳ್ತಂಗಡಿ ಅಚ್ಚಿನಡ್ಕ ನಿವಾಸಿ ಭವಾನಿ ಎಂಬುವವರು ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಕಾರ್ಕಳದ ಪಳ್ಳಿ ಗ್ರಾಮದ ಕೃಷ್ಣ ಹಾಲ್ ಗೆ ಬಂದಿದ್ದರು. ವಧು-ವರರಿಗೆ ಶುಭಹಾರೈಸುವ ವೇಳೆಯಲ್ಲಿ ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಮದುಮಗನ ಡ್ರೆಸ್ಸಿಂಗ್ ರೂಂ’ನಲ್ಲಿರಿಸಿದ್ದರು. ಮದುಮಕ್ಕಳಿಗೆ ಶುಭ ಹಾರೈಸಿ ವಾಪಸ್ ರೂಂ ತೆರಳಿದಾಗ ವ್ಯಾನಿಟ್ ಬ್ಯಾಗ್ ಕಳವಾಗಿದ್ದು ಗಮನಕ್ಕೆ ಬಂದಿತ್ತು.
ಬ್ಯಾಗ್ ನಲ್ಲಿ 52 ಸಾವಿರ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ, 6 ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ 1,200/- ನಗದು ಹಣವೂ ಕಳವಾಗಿದೆ ಎಂದು ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಲ್ ನ ಸಿಸಿ ಕ್ಯಾಮಾರದಲ್ಲಿ ಸೆರೆಯಾದ ಸಂಶವಿರುವ ವ್ಯಕ್ತಿಯ ಮಾಹಿತಿಯನ್ನು ಕಲೆ ಹಾಕಿ ಕಾಪುವಿನಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ಆರೋಪಿಯು ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಕಳವು ಮಾಡಿರುವ ಚಿನ್ನವನ್ನು ಕಾರ್ಕಳದ ಫೈನಾನ್ಸ್ ವೊಂದರಲ್ಲಿ ಅಡವು ಇಟ್ಟು ಹಣವನ್ನು ಸಾಲ ಪಡೆದಿರುವುದಾಗಿ ತಿಳಿಸಿದ್ದಾನೆ. ಅದರಂತೆ ಪೊಲೀಸರು ಕಳವು ಮಾಡಿದ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.