ವಿಟ್ಲ: ಕಳವುಗೈದು ಮಾರಾಟ ಮಾಡಿದ ವಸ್ತುಗಳನ್ನು ಕೊಂಡೊಯ್ಯಲು ಆರೋಪಿಯೊಂದಿಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣಾ ಎಸ್.ಐ. ನೇತೃತ್ವದ ಪೊಲೀಸರು ವಿಟ್ಲದ ಮೇಗಿನಪೇಟೆಯಲ್ಲಿರುವ ಗುಜಿರಿ ಅಂಗಡಿಯೊಂದಕ್ಕೆ ದಾಳಿ ಮಾಡಿದ ಘಟನೆ ಮೇ.5 ರಂದು ನಡೆದಿದ್ದು, ಅಂಗಡಿಯಲ್ಲಿದ್ದ ವ್ಯಕ್ತಿ ಈಗ ಬರುವುದಾಗಿ ಹೇಳಿ ಪರಾರಿಯಾಗಿರುವುದಾಗಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಬದಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಲದಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಮೇ.4ರಂದು ಬಂಧಿಸಿದ್ದರು.

ಆತ ನೀಡಿದ ಮಾಹಿತಿಯಂತೆ ಬದಿಯಡ್ಕ ಠಾಣಾ ಪೊಲೀಸರು ಆರೋಪಿ ಮಾರಾಟ ಮಾಡಿದ ಸಾಮಾಗ್ರಿಯನ್ನು ವಶಪಡಿಸಲು ವಿಟ್ಲದ ಗುಜಿರಿ ಅಂಗಡಿಗೆ ಬಂದಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ವ್ಯಕ್ತಿಯೋರ್ವ ಈಗ ತಂದುಕೊಡುವುದಾಗಿ ಹೇಳಿ ತೆರಳಿ ಮರಳಿ ಬಾರದೆ ನಾಪತ್ತೆಯಾಗಿದ್ದ.
ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಬದಿಯಡ್ಕ ಠಾಣಾ ಪೊಲೀಸರು ಆ ವ್ಯಕ್ತಿಗಾಗಿ ಆತನ ಅಂಗಡಿಯಲ್ಲಿ ಆತನ ಬರುವಿಕೆಗಾಗಿ ಕಾದು ಕುಳಿತಿದ್ದರು. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ, ಬದಿಯಡ್ಕ ಪೊಲೀಸರೊಂದಿಗೆ ಮಾಹಿತಿ ಪಡೆದು ಅಂಗಡಿಯಲ್ಲಿದ್ದ ಇನ್ನೋರ್ವ ವ್ಯಕ್ತಿಯನ್ನು ವಿಟ್ಲ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.