ಉಡುಪಿ: ಮಲ್ಪೆ ಬೀಚಿಗೆ ಹೊಸ ಆಕರ್ಷಣೆ ಸೇರ್ಪಡೆಯಾಗಿದೆ. ಈ ಸೇರ್ಪಡೆ ಕಡಲ ತಡಿಯ ಮೆರುಗು ಹೆಚ್ಚಿಸಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಎಂಬಂತೆ ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವಂತ ತೇಲುವ ಸೇತುವೆ ಉದ್ಘಾಟನೆಯಾಗಿದೆ.

ಕೇರಳದ ಬೇಕೂರು ಕಡಲ ತೀರದಲ್ಲಿ ಹಾಕಲಾದ ತೇಲುವ ಸೇತುವೆ ಮಾದರಿಯಲ್ಲೇ ಉಡುಪಿಯ ಮಲ್ಪೆಯಲ್ಲಿ ತೇಲುವ ಸೇತುವೆ ನಿರ್ಮಿಸಲಾಗಿದೆ. ಶಾಸಕ ರಘುಪತಿ ಭಟ್, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಾಕ್ ಮಾಡುವ ಮೂಲಕ ಈ ಸೇತುವೆಗೆ ಚಾಲನೆ ನೀಡಿದ್ರು. ಸುಮಾರು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದೆ. ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವ ಅನುಭವವನ್ನ ಈ ಸೇತುವೆ ನೀಡಲಿದೆ. ಇನ್ನು ಸುರಕ್ಷತೆಗಾಗಿ ಸೇತುವೆಯ ಎರಡು ಬದಿಗಳಲ್ಲಿ ರೇಲಿಂಗ್ಸ್ ಕೂಡ ಅಳವಡಿಸಲಾಗಿದೆ. ಮಲ್ಪೆಯ ಈ ಸೇತುವೆಗೆ ಧನಂಜಯ ಕಾಂಚನ್, ಶೇಖರ್ ಪುತ್ರನ್, ಸುದೇಶ್ ಶೆಟ್ಟಿ ಪಾಲುದಾರರಿದ್ದು, ಸುಮಾರು 80 ಲಕ್ಷ ಖರ್ಚು ಮಾಡಿ ತಯಾರಿಸಲಾಗಿದೆ.

ಇನ್ನು ಈ ಸೇತುವೆಯ ಸ್ಪೇಷಾಲಿಟಿ ಅಂದ್ರೆ ಒಂದೇ ಬಾರಿ ನೂರು ಜನರು ಈ ಸೇತುವೆ ಮೇಲೆ ಸಾಗಬಹುದಾಗಿದೆ. ಒಬ್ಬರಿಗೆ 15 ನಿಮಿಷಗಳ ಕಾಲ ಕಳೆಯಲು ಅವಕಾಶ ನೀಡಲಾಗಿದೆ. ಒಬ್ಬರಿಗೆ ನೂರು ರೂಪಾಯಿ ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಸೇತುವೆ ಇಕ್ಕೆಲಗಳಲ್ಲಿ 10 ಮಂದಿ ಲೈಫ್ ಗಾರ್ಡ್ಗಳಿದ್ದು ಅವಘಡಗಳಾದ್ರೂ ರಕ್ಷಣೆಗೆ ಸರ್ವ ಸನ್ನದ್ಧರಾಗಿರುತ್ತಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿರೋ ಫ್ಲೋಟಿಂಗ್ ಸೇತುವೆ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಇದರ ಮೇಲೆ ನಡೆದು ಒಂದೊಳ್ಳೆ ಅನುಭವ ಪಡೆಯಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಮಲ್ಪೆ ಬೀಚ್ಗೆ ಈ ಸೇತುವೆ ಮತ್ತಷ್ಟು ಕಳೆತಂದಿದೆ.
