ಮಂಗಳೂರು: ಆಜಾನ್ ಗೆ ಪ್ರತಿಯಾಗಿ ಮೇ.9 ರಿಂದ ಬೆಳಗ್ಗೆ ಧ್ವನಿವರ್ಧಕಗಳ ಮೂಲಕ ಸುಪ್ರಭಾತ, ಭಕ್ತಿಗೀತೆ ಹಾಕುವಂತೆ ಶ್ರೀರಾಮ ಸೇನೆ ಕರೆ ನೀಡಿದ್ದು, ಮಂಗಳೂರಿನಲ್ಲಿ ಈ ವಿಷಯವಾಗಿ ಹೆಚ್ಚಿನ ಸ್ಪಂದನೆ ಸಿಕ್ಕಿಲ್ಲ. ಆದರೆ ನಿನ್ನೆ ಕಮಿಷನರೇಟ್ ವ್ಯಾಪ್ತಿಯ ಒಂದು ಕಡೆ ಕೊರಗಜ್ಜನ ಭಕ್ತಿಗೀತೆ ಕೇಳಿ ಬಂದಿದೆ ಎನ್ನಲಾಗಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮದ ಶಿವಾಜಿ ಪ್ರತಿಮೆ ಬಳಿ ತಾತ್ಕಾಲಿಕ ಅಯ್ಯಪ್ಪ ಭಕ್ತರ ಶಿಬಿರದಲ್ಲಿ ತುಳುನಾಡು ಆರಾಧ್ಯ ದೈವ ಕೊರಗಜ್ಜನ ಭಕ್ತಿಗೀತೆ ಮೊಳಗಿರುವುದು ಬೆಳಕಿಗೆ ಬಂದಿದೆ.
ಬೆಳಗ್ಗೆ 5.10ರಿಂದ 40 ನಿಮಿಷಗಳ ಕಾಲ ಹಾಡುಗಳನ್ನು ನುಡಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ತನಿಖೆಯ ನಂತರ ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ನಗರ ವ್ಯಾಪ್ತಿಯಲ್ಲಿ ಬೇರೆ ಮಸೀದಿ ಅಥವಾ ಮುಸ್ಲಿಮರ ಧಾರ್ಮಿಕ ಸ್ಥಳಗಳ ಬಳಿ ಯಾವುದೇ ಚಟುವಟಿಕೆ ಗಮನಕ್ಕೆ ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.