ಉತ್ತರ ಪ್ರದೇಶ: ಎಲ್ಲಾ ಮದರಸಾಗಳಲ್ಲಿ ಮೇ.12 ರಿಂದ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ರಿಜಿಸ್ಟ್ರಾರ್ ಎಸ್.ಎನ್. ಪಾಂಡೆ ಅವರು ಈ ಕುರಿತು ಮೇ 9 ರಂದು ಆದೇಶ ಹೊರಡಿಸಿದ್ದಾರೆ.
ಮದರಸಾಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ ಬಗ್ಗೆ ಮಾರ್ಚ್ 24 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಗುರುವಾರದಿಂದ ರಂಜಾನ್ ರಜೆ ಕಳೆದು ಮದರಸಾಗಳಲ್ಲಿ ತರಗತಿಗಳು ಆರಂಭವಾಗಿವೆ. ಅದೇ ದಿನದಂದು ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಆದೇಶ ಬಂದಿದೆ. ಆದೇಶ ಪಾಲನೆ ಜವಾಬ್ದಾರಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮದರಿಸ್ ಅರೇಬಿಯಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಿವಾನ್ ಸಾಹಬ್ ಜಮಾನ್ ಖಾನ್ ಮಾತನಾಡಿ, ಮದರಸಾಗಳಲ್ಲಿ ತರಗತಿಗಳು ಪ್ರಾರಂಭವಾಗುವ ಮುನ್ನ ಸಾಮಾನ್ಯವಾಗಿ ಹಮ್ದ್ (ಅಲ್ಲಾಹನಿಗೆ ಸ್ತುತಿ) ಮತ್ತು ಸಲಾಮ್ (ಮುಹಮ್ಮದ್ ಅವರಿಗೆ ನಮಸ್ಕಾರ) ಪಠಣೆ ನಡೆಯುತ್ತಿದೆ. ಆದರೆ ಕೆಲವೆಡೆ ರಾಷ್ಟ್ರಗೀತೆಯನ್ನೂ ಹಾಡಲಾಗುತ್ತಿದೆಯಾದರೂ ಕಡ್ಡಾಯವಾಗಿರಲಿಲ್ಲ. ಇದೀಗ ಸರ್ಕಾರ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶಿಸಿದೆ ಎಂದು ತಿಳಿಸಿದ್ದಾರೆ.