ವೇಣೂರು: ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ವಾಹನ ಮತ್ತು ದನ ವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳು ಪರಾರಿಯಾದ ಘಟನೆ ನಿಟ್ಟದೆ ಪೆರ್ಮುಡ ಎಂಬಲ್ಲಿ ನಡೆದಿದೆ.
ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಾರಿನಲ್ಲಿ ಅಕ್ರಮ ದನ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೆರ್ಮುಡ ಎಂಬಲ್ಲಿ ಕಾಯುತ್ತಿರುವಾಗ ಮಾರುತಿ 800 ಕಾರು ವೇಗವಾಗಿ ಬರುತ್ತಿದ್ದು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಹೋಗಿದ್ದು, ಪೊಲೀಸರು ಸುಮಾರು 1/2 ಕಿಮೀ ದೂರ ಹೋದಾಗ ಆರೋಪಿತರು ಮಾರುತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ಪರಾರಿಯಾದ ಆರೋಪಿಗಳನ್ನು ಉಳ್ತುರು ನಿವಾಸಿ ಯಾಸಿರ್ ಮತ್ತು ಹುಣ್ಸೆಪಲ್ಕೆ ನಿವಾಸಿ ಇಬ್ರಾಹಿಂ ಖಲೀಲ್ ಎನ್ನಲಾಗಿದೆ.
ಅಕ್ರಮವಾಗಿ ದನ ಸಾಗಾಟಕ್ಕೆ ಉಪಯೋಗಿಸುತ್ತಿದ್ದ 45,000 ರೂ. ಬೆಲೆಯ ಮಾರುತಿ 800 ಕಾರು ಮತ್ತು 2000 ರೂ. ಬೆಲೆಯ ದನವನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಠಾಣೆಯಲ್ಲಿ ಅ.ಕ್ರ ನಂಬ್ರ 31-2022 ಕಲಂ: ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ರನ್ವಯ ಪ್ರಕರಣ ದಾಖಲಾಗಿದೆ.