ಮಂಗಳೂರು: ದ.ಕ.ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಸಲು 15 ದಿನದೊಳಗೆ ಅನುಮತಿ ಪಡೆಯಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.
ಇನ್ನು ಮುಂದೆ ಜಿಲ್ಲೆಯಲ್ಲಿ ಎಲ್ಲ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯ.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು 2000 ಹಾಗೂ ಪರಿಸರ ರಕ್ಷಣೆ ಕಾಯ್ದೆ1986ರಂತೆ ಶಬ್ದ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಿತಿ ರಚಿಸಲಾಗಿದೆ.
ಒಂದು ವೇಳೆ 15 ದಿನಗಳ ಒಳಗಾಗಿ ಅನುಮತಿ ಪಡೆಯದಿದ್ದಲ್ಲಿ ಅಂತಹ ಕೇಂದ್ರಗಳು ಸ್ವಯಂ ಪ್ರೇರಿತವಾಗಿ ಮೈಕ್‌ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಅಧಿಕೃತ ಪ್ರಾಧಿಕಾರದಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಈ ಕಾಯ್ದೆಯ ಪ್ರಕಾರ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸಾರ್ವಜನಿಕರು ಯಾವುದೇ ಸಭೆ ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಕೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕಗಳನ್ನು ಬಳಸಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.




























