ಬೆಂಗಳೂರು: ನಗರದ ವಾಟಾಳ್ ನಾಗರಾಜ್ ರಸ್ತೆಯ ಆರ್.ಆರ್.ಕಲ್ಯಾಣ ಮಂಟಪದ ಸಮೀಪ ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮಪುರದ ಸತೀಶ್ ಅಲಿಯಾಸ್ ಕೋಳಿಬಾಡಿ ಹಾಗೂ ವಸಂತ ಬಂಧಿತರಾಗಿದ್ದು, ಆರೋಪಿಗಳಿಂದ 45.1 ಕೆ.ಜಿ ಗಾಂಜಾ ಹಾಗೂ ಆಟೋವನ್ನು ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಗಾಂಜಾ ತೆಗೆದುಕೊಂಡು ಆರೋಪಿಗಳು ತೆರಳುವಾಗ ಮಾರ್ಗ ಮಧ್ಯೆ ಖಚಿತ ಮಾಹಿತಿ ಪಡೆದು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಡಿಮೆ ಅವಧಿಯಲ್ಲಿ ಶ್ರೀಮಂತನಾಗುವ ಕನಸಿಗೆ ಗಾಂಜಾ ಮಾರುತ್ತಿದ್ದ ಪದವೀಧರ: ಆಟೋ ಚಾಲಕ ಸತೀಶ್ ವೃತ್ತಿಪರ ಗಾಂಜಾ ಪೆಡ್ಲರ್ ಆಗಿದ್ದು, ಶ್ರೀರಾಮಪುರ ಠಾಣೆಯಲ್ಲಿ ಹಳೇ ಆರೋಪಿಗಳ ಪಟ್ಟಿಯಲ್ಲಿ ಆತನ ಹೆಸರಿದೆ. ಸತೀಶ್ ವಿರುದ್ಧ ನಂದಿನಿ ಲೇಔಟ್ ಮತ್ತು ಶ್ರೀರಾಮಪುರ ಗಾಂಜಾ ದಂಧೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪೆಡ್ಲರ್‌ನನ್ನು ಸಂಪರ್ಕಿಸಿ ಸತೀಶ್, ಆತನಿಗೆ ಮುಂಗಡಣ ಹಣ ಕೊಟ್ಟು ಗಾಂಜಾಗೆ ಬೇಡಿಕೆ ಇಟ್ಟಿದ್ದ. ಅಂತೆಯೇ ಆಂಧ್ರಪ್ರದೇಶದ ಪೆಡ್ಲರ್ ರೈಲಿನಲ್ಲಿ ಲಗೇಜ್‌ನಂತೆ ಗಾಂಜಾವನ್ನು ಪಾರ್ಸಲ್ ಮಾಡಿ ತನ್ನ ಸಹಚರನ ಮೂಲಕ ಬೆಂಗಳೂರಿಗೆ ಕಳುಹಿಸಿದ್ದ. ಹೀಗೆ ರೈಲಿನಲ್ಲಿ ಬಂದ ಗಾಂಜಾವನ್ನು ಮಾ.23ರಂದು ಆಟೋದಲ್ಲಿ ತುಂಬಿಕೊಂಡು ಆರೋಪಿಗಳು ತೆರಳುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು.
ಈ ಗಾಂಜಾವನ್ನು ಚಿಕ್ಕ ಚಿಕ್ಕ ಪೊಟ್ಟಣ ಮಾಡಿ ತಲಾ ಪೊಟ್ಟಣಕ್ಕೆ 250 ರಿಂದ 300 ಗೆ ಮಾರುತ್ತಿದ್ದರು. ಗುಣಮಟ್ಟದ ಗಾಂಜಾವನ್ನು ಮ್ಯಾಂಗೋ ಎಂಬ ಕೋಡಿಂಗ್ ನೀಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆ ತಪ್ಪಿಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಶ್ರೀರಾಮಪುರ ಠಾಣೆ ಇನ್ಸ್‌ಪೆಕ್ಟರ್ ಆರ್.ಬಾಲಕೃಷ್ಣ ನೇತೃತ್ವದಲ್ಲಿ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.