ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿಗಳು ಸಾಹುಕಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳಸಿದ್ದರು ಎಂದು ಆರೋಪಿಸಿರುವ ಯುವತಿ ಶುಕ್ರವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇಂದು ಮಧ್ಯಾಹ್ನ ಯುವತಿ ಪರವಾಗಿ ವಕೀಲ ಕೆಎನ್ ಜಗದೀಶ್ ಕುಮಾರ್ ಅವರು ಸ್ವತಃ ಯುವತಿ ಕೈಯಿಂದ ಬರೆದುಕೊಟ್ಟ ದೂರಿನ ಪ್ರತಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ನೀಡಿದರು. ದೂರನ್ನು ಪರಿಶೀಲಿಸಿದ ಆಯುಕ್ತರು, ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವರ್ಗಾಯಿಸಿದ್ದರು.
ನಾನು ಪೊಲೀಸರಿಗೆ ದೂರು ನೀಡದಂತೆ ತಡೆಯಲು ಯತ್ನಿಸಿದರು ಮತ್ತು ನನ್ನ ಹತ್ಯೆಗೆ ರಮೇಶ್ ಜಾರಕಿಹೊಳಿ ಅವರು ಮುಂದಾಗಿದ್ದರೂ ಎಂದು ಯುವತಿ ಗಂಭೀರ ಆರೋಪ ಮಾಡಿದ್ದು ಇದೇ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯುವತಿ ದೂರಿನಲ್ಲಿ ಆಧಾರದ ಮೇಲೆ ಲೈಂಗಿಕವಾಗಿ ದುರ್ಬಳಕೆ, ಕೊಲೆ ಯತ್ನ, ಆತ್ಮಹತ್ಯೆಗೆ ಪ್ರಚೋದನೆ, ವಂಚನೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಬಹುದಾಗಿದೆ.
ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾರೆ. ವಿಡಿಯೋ ಕರೆ ಮಾಡಿ ಅಶ್ಲೀಲ ಮಾತು. ನಗ್ನವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸದೇ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಿಡಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದು ಈ ದೂರನ್ನು ನನಗೆ ಪರಿಚಿತ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ದಯವಿಟ್ಟು ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡ, ಅವರನ್ನು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದು, ತಾವು ರಮೇಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ನಮಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಬೇಕೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿಡಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.