ಅಬುಧಾಬಿ: ಮೊದಲ ಬಾರಿಗೆ ಅಬುಧಾಬಿಯಲ್ಲಿ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಹಿಂದೂ ದೇಗುಲಕ್ಕೆ ಬೃಹತ್ ಅಡಿಪಾಯ ಹಾಕಲಾಗಿದೆ. ಈ ಅಡಿಪಾಯಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ. ಬೋಚಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಂ ಸ್ವಾಮಿನಾರಾಯಣ್ ಸಂಸ್ಥೆ(ಬಿಎಪಿಎಸ್) 450 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಾಣ ಮಾಡುತ್ತಿದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಫೌಂಡೇಷನ್ ಕಾರ್ಯ ಮುಕ್ತಾಯವಾಗುವ ಸಾಧ್ಯತೆಯಿದೆ.
ಅಬು ಮರೇಖಾ ಪ್ರದೇಶದಲ್ಲಿ 27 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ದೇವಸ್ಥಾನ ಬೃಹತ್ ಅಡಿಪಾಯ ಹಾಕಲಾಗುತ್ತಿದೆ. ನೆಲ ಮಟ್ಟದಿಂದ 4.5 ಮೀಟರ್ ಅಡಿಪಾಯದ ಹಾಕಲಾಗಿದೆ. ಜನವರಿ ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಸುಮಾರು 4,500 ಕ್ಯೂಬಿಕ್ ಕಾಂಕ್ರೀಟ್ ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಮತ್ತೆ ಅರ್ಚಕರಿಗಾಗಿ ಕೆಳಗಡೆ ಎರಡು ಸುರಂಗ ನಿರ್ಮಾಣ ಮಾಡಲಾಗುತ್ತದೆ.
ದೇವಸ್ಥಾನ ನಿರ್ಮಾಣಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ. ಸ್ತಂಭಗಳನ್ನು ರಾಜಸ್ಥಾನ ಮತ್ತು ಗುಜರಾತ್‍ನ ಕುಶಲಕರ್ಮಿಗಳು ಕೆತ್ತನೆ ಮಾಡಲಿದ್ದಾರೆ. ಏಪ್ರಿಲ್ ಅಂತ್ಯದ ಒಳಗಾಗಿ ಫೌಂಡೇಷನ್ ಕೆಲಸ ಮುಗಿಯುತ್ತದೆ. ಮೇ ತಿಂಗಳಿನಲ್ಲಿ ಕಲ್ಲಿನ ಕೆಲಸವನ್ನು ಆರಂಭಿಸುತ್ತೇವೆ ಎಂದು ಪ್ರಾಜೆಕ್ಟ್ ಎಂಜಿನಿಯರ್ ಅಶೋಕ್ ಕೊಂಡೆಟೆ ಹೇಳಿದ್ದಾರೆ.