ಮಂಗಳೂರು : ಮಂಗಳೂರು ಮೂಲದ ದಂಪತಿಗಳಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಆಘಾತಕಾರಿ ಘಟನೆ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಿಂದ ವರದಿಯಾಗಿದೆ. ಈ ಘಟನೆಗೆ ಬಲಿಯಾದವರು ನಗರದ ಬಲ್ಮಠ ನಿವಾಸಿ ಎಲಿಜಬೆತ್ ಬಂಗೇರ ಹಾಗೂ ಅವರ ಪತಿ ಹರ್ಮನ್ ಬಂಗೇರ. ಎಂಜಿನಿಯರಿಂಗ್ ಪದವೀಧರನಾದ ಅವರ ಪುತ್ರ ಶೀಲ್ ಕೂಡಾ ಇರಿತಕ್ಕೊಳಗಾಗಿದ್ದು, ಗಂಭೀರ ಗಾಯಗೊಂಡ ಆತ ಆಸ್ಪತ್ರೆಯಲ್ಲಿದ್ದಾನೆ.
ಈ ಹತ್ಯೆ ಸಂದರ್ಭ ಮಧ್ಯಪ್ರವೇಶಿಸಲು ಯತ್ನಿಸಿದ ದಾರಿಹೋಕನೆಂದು ನಂಬಲಾದ ನಾಲ್ಕನೇ ವ್ಯಕ್ತಿಯೂ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲಿಜಬೆತ್ ಅವರ ತಂದೆ ಎಡ್ವರ್ಡ್ ಅಮ್ಮಣ್ಣ, ಬಲ್ಮಠದ ಶಾಂತಿ ಕ್ಯಾಥೆಡ್ರಲ್‌ನಲ್ಲಿರುವ ಭಾನುವಾರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೆರ್ಕರ ಹಿಲ್ ಚರ್ಚ್‌ನಲ್ಲಿ ಇವರು ಹಿರಿಯರಾಗಿದ್ದರು. ಹರ್ಮನ್ ಮುಂಬೈನ ಶಾಲೆಯೊಂದರ ನಿರ್ವಾಹಕರಾಗಿದ್ದರು.
ಎಲಿಜಬೆತ್ ಅವರು ಮುಂಬೈನ ಗೋದ್ರೆಡ್ಜ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಮುಂಬೈನಲ್ಲೇ ಇದ್ದ ಹರ್ಮನ್‌ನನ್ನು ಮದುವೆಯಾಗಿದ್ದರು. ನಂತರ ದಂಪತಿಗಳು ಗೋವಾದಲ್ಲಿ ನೆಲೆಸಿದರು. ತಮ್ಮ ಪುತ್ರನ ಉನ್ನತ ಶಿಕ್ಷಣಕ್ಕಾಗಿ ಈ ದಂಪತಿಗಳು 2007 ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದು ಹರ್ಮನ್ ಅವರು ತಮ್ಮ ಪುತ್ರನ ಪದವಿ ಪ್ರಮಾಣಪತ್ರವನ್ನು 2014 ರಲ್ಲಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ದಂಪತಿಗಳ ಪುತ್ರ ತನ್ನ ಹೆತ್ತವರಿಂದ ದೂರವಿರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದನು ಹಾಗೂ ತನ್ನ ಸ್ವಂತ ಇಚ್ಛೆಯಂತೆ ವರ್ತಿಸುತ್ತಿದ್ದನೆಂದು ಹೇಳಲಾಗಿದೆ. ಈ ವಿಚಾರದಲ್ಲಿ ಪೋಷಕರು ಹಾಗೂ ಪುತ್ರನ ನಡುವೆ ವಾಗ್ವಾದವೂ ನಡೆದಿದೆ ಎಂದು ಹೇಳಲಾಗಿದೆ.