ಆರಂತೋಡು : ಕಲ್ಲುಗುಂಡಿ ಗ್ರಾಮದ ಶ್ರೀ ಮಹಾವಿಷ್ಣು ದೈವ ಕೋಲದ ಸಂದರ್ಭ ವಿಸ್ಮಯವೊಂದು ನಡೆದಿದೆ. ಕಲ್ಲುಗುಂಡಿಯಲ್ಲಿ ನಡೆಯುವ ಶ್ರೀ ಮಹಾವಿಷ್ಣು ದೈವ ಕೋಲ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಕೋಲವನ್ನು ವೀಕ್ಷಿಸಲು ಕೊಡಗು ಜಿಲ್ಲೆಯಿಂದಲೂ ಆಗಮಿಸುತ್ತಾರೆ.
ದೈವಕೋಲಗಳು ನಡೆಯುವ ಸಂದರ್ಭ ‘ಮೇಲೇರಿ ಬೀಳುವುದು'(ಅಗ್ನಿಹಾಯುವುದು) ವಿಶೇಷ ಆಚರಣೆಯಾಗಿದೆ. ಕಲ್ಲಗುಂಡಿ, ಸಂಪಾಜೆ, ಆರಂತೋಡು, ಪೆರಾಜೆ, ಚೆಂಬು ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನ ಮೇಲೇರಿ ಸಿದ್ಧತೆಗೆ ರಾಶಿ ರಾಶಿ ಸೌದೆಯನ್ನು ಹರಕೆಯ ರೂಪದಲ್ಲಿ ನೀಡುತ್ತಾರೆ. ಸುಮಾರು 20 ರಿಂದ 30 ಅಡಿ ಎತ್ತರಕ್ಕೆ ಒಟ್ಟಲ್ಪಡುವ ಸೌದೆ ರಾತ್ರಿ ಪೂರ್ತಿ ಧಗಧಗನೇ ಉರಿಯುತ್ತದೆ. ಬೆಳಗ್ಗಿನ ಜಾವ ಕೆಂಡದ ರಾಶಿಯ ಮೇಲೆ ದೈವಗಳ ಸಂಚಾರವಿರುತ್ತದೆ. ಇದನ್ನು ನೋಡಲೆಂದೇ ಸಾವಿರಾರು ಭಕ್ತರು ಸೇರಿರುತ್ತಾರೆ.
ಈ ಬಾರಿಯೂ ಮಾ.28ರಂದು ರಾತ್ರಿ ಕಲ್ಲುಗುಂಡಿಯಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೈವಕೋಲ ನಡೆಯಿತು. ರಾಶಿ ರಾಶಿ ಸೌದೆ ಧಗಧಗನೇ ಇದನ್ನು ಅನೇಕರು ತಮ್ಮ ತಮ್ಮ ಕೆಮರಾದ ಮೂಲಕ ಸೆರೆ ಹಿಡಿದಿದ್ದರು. ಫೋಟೊ ತೆಗೆದು ನೋಡಿದಾಗ ಅಲ್ಲೊಂದು ಆಶ್ಚರ್ಯ ಕಾದಿತ್ತು. ಮೇಲೇರಿಯ ಬೆಂಕಿಯ ಜ್ವಾಲೆಯಲ್ಲಿ ಒಂದು ದೈವದ ಆಕೃತಿ ಕಾಣಿಸಿಕೊಂಡಿದೆ. ಈ ದೃಶ್ಯ ವಿಸ್ಮಯಕಾರಿಯಾಗಿದ್ದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಲವರು ಇದನ್ನು ದೈವಶಕ್ತಿ ಎಂದು ಭಕ್ತಿ ಭಾವದಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಫೋಟೊ ನೋಡಿ ಏನೂ ಹೇಳಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಬೆಂಕಿಯ ಜ್ವಾಲೆಯಲ್ಲಿ ಕಂಡು ಬಂದ ದೈವದ ಆಕೃತಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಲ್ಲುಗುಂಡಿಯ ಶ್ರೀಮಹಾವಿಷ್ಣು ಮೂರ್ತಿ ದೈವಕೋಲದ ಬಗ್ಗೆ ಚರ್ಚೆಗಳು ಆರಂಭವಾಗಿದೆ.