ಬೆಳ್ತಂಗಡಿ: ಸಮಾಜ ಪರಿವರ್ತನಾ ಚಳವಳಿಯ ನಾಯಕ ಪಿ. ಡೀಕಯ್ಯ ರವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಕುಟುಂಬಸ್ಥರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರಿಂದ ಜು.18ರಂದು ಅವರ ಮೃತದೇಹವನ್ನು ದಫನ್ ಮಾಡಲಾಗಿದ್ದ, ಕಣಿಯೂರು ಗ್ರಾಮದ ಪೊಯ್ಯ ಎಂಬಲ್ಲಿಂದ ಮೇಲಕ್ಕೆತ್ತಿ ತಹಶೀಲ್ದಾರ್ ಸುಪರ್ದಿಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪಿ. ಡೀಕಯ್ಯ ರವರು10 ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ತನ್ನ ಮನೆಯಲ್ಲಿ ಕುಸಿದು ಬಿದ್ದಿದ್ದರು. ಅಂದಿನ ರಾತ್ರಿ ಅವರ ಪತ್ನಿ ಪದ್ಮುಂಜದ ಪೊಯ್ಯದಲ್ಲಿರುವ ಡೀಕಯ್ಯರ ಮೂಲ ಮನೆಯಲ್ಲಿದ್ದರು.

ಗರ್ಡಾಡಿಯ ಮನೆಯಲ್ಲಿ ಡೀಕಯ್ಯ ಅವರು ಒಬ್ಬರೇ ಇದ್ದರು. ಬೆಳಗ್ಗೆ ಅವರ ಪತ್ನಿ ಗರ್ಡಾಡಿಯ ಮನೆಗೆ ಹೋದಾಗ ಅವರು ಕುಸಿದು ಬಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ತಕ್ಷಣ ಅವರನ್ನು ಅದೇ ಸ್ಥಿತಿಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ನಂತರ ವೆಂಟಿಲೆಂಟರ್ನಲ್ಲಿದ್ದ ಅವರು 24 ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದರು.
ಡೀಕಯ್ಯ ರವರ ಮೃತದೇಹವನ್ನು ಕಣಿಯೂರು ಗ್ರಾಮದ ಪದ್ಮುಂಜ ಬಳಿಯ ಪೊಯ್ಯದ ಮೂಲ ಮನೆಗೆ ತಂದು ದಫನ್ ಮಾಡಲಾಗಿತ್ತು.
ಡೀಕಯ್ಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತರ ತಾಯಿಯ ಕುಟುಂಬಸ್ಥರ ಪರವಾಗಿ ಡೀಕಯ್ಯ ಅವರ ಸಹೋದರಿಯ ಗಂಡ ಪದ್ಮನಾಭ ಎಂಬವರು ಜು.15 ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಡೀಕಯ್ಯರ ಅಕಾಲಿಕ ಅಸಹಜ ಸಾವಿನ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದರು.
ದೂರು ಸ್ವೀಕರಿಸಿದ ಬೆಳ್ತಂಗಡಿ ಪೊಲೀಸರು ಅದರ ಮುಂದಿನ ಪ್ರಕ್ರಿಯೆಗಾಗಿ ಪುತ್ತೂರು ಉಪವಿಭಾಗಾಧಿಕಾರಿಯವರಿಗೆ ಹಸ್ತಾಂತರಿಸಿದ್ದರು. ಪುತ್ತೂರು ಉಪವಿಭಾಗಾಧಿಕಾರಿಯವರ ಆದೇಶದಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನ್ವಿಕಂ ನೇತೃತದಲ್ಲಿ ಜು.18 ರಂದು ದಫನ್ ಮಾಡಿದ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.
ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪೋರೋನಿಕ್ಸ್ ತಜ್ಞರಾದ ಡಾ. ರಶ್ಮಿ ಹಾಗೂ ಸಿಬ್ಬಂದಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಶ್ಮಿ ಅವರ ನೇತೃತ್ವದಲ್ಲಿ ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು.
ಈ ಸಂದರ್ಭ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಉಪಸ್ಥಿತರಿದ್ದರು.



























